ಸಮ್ಮೇಳನ ಯಶಸ್ಸಿಗೆ ಟೊಂಕ ಕಟ್ಟಿದ ಸ್ವಯಂ ಸೇವಕರು

ಧಾರವಾಡ: ಸಾಹಿತ್ಯದ ತವರು ಧಾರವಾಡದಲ್ಲಿ ಮೂರು ದಿನ ಜರುಗಲಿರುವ ಅಕ್ಷರ ಜಾತ್ರೆಯಲ್ಲಿ ನಿಸ್ವಾರ್ಥ ಮನೋಭಾವದಿಂದ ಕಾಯಕ ಮಾಡಲು 3 ಸಾವಿರಕ್ಕಿಂತ ಅಧಿಕ ಸ್ವಯಂ ಸೇವಕರು ಟೊಂಕಕಟ್ಟಿ ನಿಂತಿದ್ದಾರೆ.

ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡಲಿರುವ ಸ್ವಯಂಸೇವಕರು, ಸಮ್ಮೇಳನದ ಯಶಸ್ಸಿಗಾಗಿ ದುಡಿಯುತ್ತಿದ್ದಾರೆ. ಆಹಾರ, ವಸತಿ, ಮೆರವಣಿಗೆ, ವೇದಿಕೆ, ಸ್ವಚ್ಛತೆ, ವ್ಯಾಪಾರಿ ಮಳಿಗೆ ಮತ್ತು ಮಾಧ್ಯಮ ವಿಭಾಗಗಳ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚನೆ ಮೇರೆಗೆ ಕಾಲೇಜು ಶಿಕ್ಷಣ ಇಲಾಖೆ 3 ಸಾವಿರ ಸ್ವಯಂಸೇವಕರನ್ನು ಈ ಕೆಲಸಕ್ಕೆ ಬಳಕೆ ಮಾಡಿಕೊಂಡಿದೆ. ಸ್ವಯಂಸೇವಕರ ಪಟ್ಟಿಯಲ್ಲಿ 2 ಸರ್ಕಾರಿ, 8 ಖಾಸಗಿ ಸೇರಿ ಒಟ್ಟು 10 ಪದವಿ ಕಾಲೇಜುಗಳ ವಿದ್ಯಾರ್ಥಿಗಳು, 300 ಪ್ರಾಥಮಿಕ ಶಾಲೆಗಳ ಶಿಕ್ಷಕರು, 65 ಸ್ಕ್ವಾಡ್​ಗಳು ಸೇರಿದ್ದಾರೆ.

ಏನೇನು ಕೆಲಸ?

ಸಮ್ಮೇಳನ ವೀಕ್ಷಣೆಗೆ ಬರುವ ಸಾಹಿತ್ಯಾಸಕ್ತರಿಗೆ ಕೃಷಿ ವಿವಿಯ ಆವರಣ, ವಿವಿಐಪಿಗಳಿಗೆ ವಿವಿ ಆವರಣದಲ್ಲಿರುವ ಅತಿಥಿಗೃಹ ಹಾಗೂ ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದಲ್ಲೇ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಊಟದ ಮಳಿಗೆಗಳಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ, ಆಹಾರವು ಪೋಲಾಗದಂತೆ ಸ್ವಯಂಸೇವಕರು ಅರಿವು ಮೂಡಿಸುತ್ತಿದ್ದಾರೆ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿನ ಹಾಸ್ಟೆಲ್​ಗಳು, ಕಲ್ಯಾಣ ಮಂಟಪಗಳು, ಹೋಟೆಲ್​ಗಳು ಮತ್ತು ಶೌಚಗೃಹ ವ್ಯವಸ್ಥೆ ಒಳಗೊಂಡಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸಮ್ಮೇಳನಕ್ಕೆ ಬಂದ ಅತಿಥಿಗಳು, ಅಧಿಕಾರಿಗಳು ಮತ್ತು ಇತರ ಗಣ್ಯರಿಗೆ ನೆರವಾಗುತ್ತಿದ್ದಾರೆ.

ಜ. 4ರಂದು ಕೆಸಿಡಿ ಕಾಲೇಜ್​ನಿಂದ ಕೃಷಿ ವಿವಿಯ ಆವರಣದವರೆಗೆ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ ಅವರ ಮೆರವಣಿಗೆ ನಡೆದಾಗ ಮೆರವಣಿಗೆ ಮಾರ್ಗ ಮಧ್ಯದಲ್ಲಿ ಹಲವು ಸಂಘಟನೆಗಳು, ಗಣ್ಯರು ಕುಡಿಯುವ ನೀರು, ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು. ಸ್ವಯಂ ಸೇವಕರು ಇವುಗಳನ್ನು ಜನರಿಗೆ ತಲುಪಿಸಲು ಶ್ರಮಿಸಿದ್ದಾರೆ. ಇದಲ್ಲದೆ, ವೇದಿಕೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು, ಮಾಧ್ಯಮದವರಿಗೆ ಬೇಕಿರುವ ಸೌಲಭ್ಯ ಒದಗಿಸಲು ಶ್ರಮಿಸುತ್ತಿದ್ದಾರೆ.

ಎನ್​ಜಿಒಗಳು ಸಾಥ್

ಕಾಲೇಜ್ ಶಿಕ್ಷಣ ಇಲಾಖೆಯ 3 ಸಾವಿರ ವಿದ್ಯಾರ್ಥಿಗಳ ಜತೆಗೆ, ಹಲವು ಸಂಘ-ಸಂಸ್ಥೆಗಳು, ಎನ್​ಜಿಒಗಳು ಸ್ವಯಂ ಸೇವೆ ಮಾಡಲು ಮುಂದೆ ಬಂದಿವೆ. ಸಮ್ಮೇಳನದ ಯಶಸ್ಸಿಗಾಗಿ ಕೈಜೋಡಿಸುವುದಾಗಿ ಜಿಲ್ಲಾಡಳಿತಕ್ಕೆ ತಿಳಿಸಿವೆ ಎಂದು ಸ್ವಯಂ ಸೇವಕರ ನಿರ್ವಹಣಾ ಸಮಿತಿ ಕಾರ್ಯದರ್ಶಿಯೂ ಆಗಿರುವ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಾ. ನೀಲಾಂಬಿಕಾ ‘ವಿಜಯವಾಣಿ’ಗೆ ತಿಳಿಸಿದ್ದಾರೆ.