ಸಮ್ಮಿಶ್ರ ಸರ್ಕಾರ ಸುಭದ್ರ

ಕುಣಿಗಲ್ : ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಆಟ ನಡೆಯುವುದಿಲ್ಲ, ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸಂಸದರ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದರು.

ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿಯವರು ತಂತ್ರ ಹೆಣೆಯುತ್ತಿದ್ದರೆ, ನಾನು, ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರು ಪ್ರತಿತಂತ್ರ ಹೆಣೆದಿದ್ದೇವೆ ಎಂದು ತಿರುಗೇಟು ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಸೋಲಿಗೆ ನಿರಾಸೆ ಹೊಂದುವ ಅವಶ್ಯಕತೆ ಇಲ್ಲ. 1978ರಲ್ಲಿ ಇದಕ್ಕಿಂತಲೂ ಕಠಿಣ ಪರಿಸ್ಥಿತಿಯನ್ನು ಕಾಂಗ್ರೆಸ್​ಗೆ ಎದುರಿಸಿದೆ. ಕೇವಲ ಮೂರೇ ವರ್ಷದಲ್ಲಿ ಮತ್ತೆ ಕಾಂಗ್ರೆಸ್ ಪುಟಿದೆದ್ದು ಅಧಿಕಾರಿ ಹಿಡಿಯಿತು. ಇದರಂತೆ ಮತ್ತೆ ಕಾಂಗ್ರೆಸ್ ಪುಟಿದೇಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಡಾ.ರಂಗನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಧಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡರಾದ ಕೆಂಪೀರೇಗೌಡ, ಸುಂದರಕುಪ್ಪೆ ಪಾಪಣ್ಣ, ಅಭ್ಯರ್ಥಿಗಳಾದ ರಂಗನಾಥಯ್ಯ, ಸಮಿವುಲ್ಲಾ, ಎಸ್.ಕೆ.ನಾಗೇಂದ್ರ, ಉದಯಕುಮಾರ್, ಶಿವಕುಮಾರ್, ಮಂಜುಳಾ ರಂಗಪ್ಪ, ವಿಜಯಮ್ಮ ಇದ್ದರು.

ಅಭಿವೃದ್ಧಿಗೆ ಮತ ನೀಡಿ:- ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನ ಪಡೆಯುವ ವಿಶ್ವಾಸ ಇದೆ. ಲೋಕಸಭೆ ಚುನಾವಣೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅವರನ್ನೇ ಕುಣಿಗಲ್ ಜನತೆ ಆಯ್ಕೆ ಮಾಡಿಕೊಂಡಿದ್ದಾರೆ. ನನ್ನನ್ನೂ ಸೇರಿ ಶಾಸಕ ಡಾ.ರಂಗನಾಥ್ ಹಾಗೂ ಸಚಿವ ಡಿ.ಕೆ.ಶಿವಕುಮಾರ ಪಟ್ಟಣದ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಮತದಾರರು ನಿಮಗೇ ಮತ ಹಾಕುತ್ತೇವೆ ಎನ್ನುವವರೆಗೂ ಮನವೊಲಿಸಿ ಎಂದು ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಿಗೆ ಪರಂ ಸೂಚಿಸಿದರು.