ಸಮುದ್ರ ತಳದಲ್ಲಿ ಹಡಗಿನ ಅವಶೇಷ ಪತ್ತೆ

ಕಾರವಾರ: ನಗರ ದೇವಗಡ ದ್ವೀಪದ ಬಳಿ ಸ್ಕೂಬಾ ಡೈವಿಂಗ್ ಪ್ರಾರಂಭಿಸಿರುವ ಮುಳುಗು ತಜ್ಞರು ಹಡಗಿನ ಅವಶೇಷಗಳನ್ನು ಪತ್ತೆ ಹಚ್ಚಿದ್ದು, ಅಚ್ಚರಿಗೆ ಕಾರಣವಾಗಿದೆ.

ನಗರದ ಟ್ಯಾಗೋರ್ ಕಡಲ ತೀರದಿಂದ 10 ಕಿಮೀ ದೂರದಲ್ಲಿರುವ ಲೈಟ್ ಹೌಸ್ ಎಂದು ಪ್ರಸಿದ್ಧವಾಗಿರುವ ಅರಬ್ಬಿ ಸಮುದ್ರದ ನಡುವೆ ಇರುವ ದ್ವೀಪದ ಬಳಿ ಅ.8ರಿಂದ ಮುರ್ಡೆಶ್ವರ ಮೂಲದ ನೇತ್ರಾಣಿ ಅಡ್ವೆಂಚರ್ಸ್ ಎಂಬ ಪ್ರವಾಸೋದ್ಯಮ ಸಂಸ್ಥೆ ಸ್ಕೂಬಾ ಡೈವಿಂಗ್ ಪ್ರಾರಂಭಿಸಿದೆ. ನೇತ್ರಾಣಿ ಅಡ್ವೆಂಚರ್ಸ್ ಮಾಲೀಕ ಗಣೇಶ ಹರಿಕಂತ್ರ ಅವರಿಗೆ ಹಡಗಿನ ಅವಶೇಷಗಳು ಪತ್ತೆಯಾಗಿವೆ. ದ್ವೀಪದಿಂದ ಕೇವಲ 50 ಮೀಟರ್ ವ್ಯಾಪ್ತಿಯಲ್ಲಿ 3.50 ಮೀಟರ್​ನಿಂದ 6 ಮೀಟರ್​ವರಗೂ ಉದ್ದವಿರುವ ಹಡಗಿನ ಚೂರುಗಳು ಇದ್ದು, ಅವುಗಳ ಮೇಲೆ ಹವಳದ ದಂಡೆಗಳು ಬೆಳೆದುಕೊಂಡಿವೆ.

 

ಓಶಿಯನ್ ಸೆರೆಯಾ ಅವಶೇಷ..?

2006ರ ಮೇ 30ರಂದು ಕಾರವಾರ ಬೈತಖೋಲ ವಾಣಿಜ್ಯ ಬಂದರಿಗೆ ಆಗಮಿಸುತ್ತಿದ್ದ ಸಿಂಗಾಪುರ ಮೂಲದ ಎಂವಿ ಓಶಿಯನ್ ಸೆರೆಯಾ ಎಂಬ ಹಡಗು ಲೈಟ್ ಹೌಸ್ ಬಳಿ ಕಲ್ಲಿಗೆ ಅಪ್ಪಳಿಸಿ ಇಬ್ಭಾಗವಾಗಿತ್ತು. ಹಡಗಿನಲ್ಲಿದ್ದ 22 ಸಿಬ್ಬಂದಿ ಪೈಕಿ 21 ಜನರನ್ನು ರಕ್ಷಿಸಲಾಗಿತ್ತು. ಅಜೀಜ್ ಜುವೆಲೆ ಎಂಬ 29 ವರ್ಷದ ಅಧಿಕಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. 75 ಸಾವಿರ ಟನ್ ಭಾರವಿರುವ 230 ಮೀಟರ್ ಉದ್ದದ ಹಡಗಿನ ಅವಶೇಷಗಳನ್ನು ಮುಂಬೈನ ಅರಿಹಂತ ಎಂಬ ಸಂಸ್ಥೆಯ ತಜ್ಞರು ಸತತ ಎರಡು ವರ್ಷ ಪ್ರಯತ್ನ ನಡೆಸಿ ಒಡೆದು ತೆಗೆದಿದ್ದರು. ಹಡಗಿನ ಶೇ. 70ರಷ್ಟು ಭಾಗಗಳನ್ನು ಸಮುದ್ರದಿಂದ ಹೊರಗೆ ಕೊಂಡೊಯ್ದಿದ್ದರು. ಅತೀ ಭಾರವಿರುವ 30ರಷ್ಟು ಭಾಗಗಳನ್ನು ಸಾಗಿಸಲು ಸಾಧ್ಯವಾಗಿಲ್ಲ. ಅವು ಕಳೆದ 12 ವರ್ಷಗಳಲ್ಲಿ ಸಮುದ್ರದ ಆಳ ಸೇರಿ ಸಾಗರದ ಭಾಗವಾಗಿವೆ. ಅದೇ ಅವಶೇಷಗಳಿರಬಹುದು ಎಂದು ಅಂದಾಜಿಸಲಾಗಿದೆ.

ಕಾರವಾರ ದೇವಗಡ ದ್ವೀಪದ ಬಳಿ ನೀರು ನೇತ್ರಾಣಿ ನಡುಗಡ್ಡೆಯಷ್ಟು ನಿರ್ಮಲವಾಗಿರದಿದ್ದರೂ ಸ್ಕೂಬಾ ಡೈವಿಂಗ್​ಗೆ ಅನುಕೂಲವಾಗಿದೆ. ಸಾಕಷ್ಟು ಹವಳದ ದಂಡೆಗಳಿದ್ದು, ಹಡಗಿನ ಅವಶೇಷಗಳನ್ನು ನೋಡುವುದೇ ಒಂದು ರೋಮಾಂಚನಕಾರಿ ಅನುಭವ.

| ಗಣೇಶ ಹರಿಕಂತ್ರ, ಮುಳುಗು ತಜ್ಞ, ನೇತ್ರಾಣಿ ಅಡ್ವೆಂಚರ್ಸ್ ಮಾಲೀಕ