ಸಮುದಾಯ ಭವನ ನಿರ್ವಿುಸಲು ಕ್ರಮ

ಹೊಳೆಆಲೂರ: ವಿಶ್ವಕರ್ಮ ಸಮಾಜ ಅನಾದಿ ಕಾಲದಿಂದ ಸುವರ್ಣ, ಲೋಹ, ಕೆತ್ತನೆ, ಕಮ್ಮಾರಿಕೆ, ವಾಸ್ತು ಶಿಲ್ಪ ವೃತ್ತಿಯಿಂದಾಗಿ ಸಕಲ ಸಮಾಜಗಳ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದ್ದರೂ, ಇಂದಿನ ಯಾಂತ್ರಿಕ ಬದುಕು ಪಂಚ ವಿದ್ಯಾ ಪ್ರವೀಣರನ್ನು ಆರ್ಥಿಕ, ಸಾಮಾಜಿಕವಾಗಿ ದುಸ್ಥಿತಿಗೆ ತಳ್ಳಿರುವುದು ವಿಷಾದನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಸ್ಥಳೀಯ ವಿಶ್ವಕರ್ಮ ವಿಕಾಸ ಸಂಸ್ಥೆ, ಗಾಯತ್ರಿ ಮಹಿಳಾ ಮಂಡಳ ಹಾಗೂ ವಿಶ್ವಕರ್ಮ ಯುವಕ ಮಂಡಳದ ಸಹಯೋಗದಲ್ಲಿ ಯಚ್ಚರೇಶ್ವರ ಶಾಲಾ ಆವರಣದಲ್ಲಿ ಭಾನುವಾರ ಜರುಗಿದ ವಿಶ್ವಕರ್ಮ ಶೋಭಾ ಯಾತ್ರೆ, ಗಣ್ಯರಿಗೆ ಸನ್ಮಾನ ಹಾಗೂ ಧರ್ಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಶೀಘ್ರದಲ್ಲಿಯೇ ಸಮುದಾಯ ಭವನ ನಿರ್ವಿುಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಯಚ್ಚರೇಶ್ವರ ಬಾಲ ವಿಕಾಸ ವಿದ್ಯಾ ಮಂದಿರದ ಗೌರವಾಧ್ಯಕ್ಷ ಎ.ಎನ್. ಬಡಿಗೇರ ಮಾತನಾಡಿ ಸಮಾಜದ ಅಭಿವೃದ್ಧಿಯಾಗಬೇಕಾದರೆ ಸಮಾಜದ ಮಕ್ಕಳು ಹಾಗೂ ಮಹಿಳಾ ಶಿಕ್ಷಣಕ್ಕೆ ಸಂಘಟಿತ ಪ್ರಯತ್ನಕ್ಕೆ ಒತ್ತು ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ರಾಮಣ್ಣ ಬಡಿಗೇರ ಅವರಿಗೆ ಶ್ರೇಷ್ಠ ಸುವರ್ಣ ಶಿಲ್ಪಿ, ಬಾಗಲಕೋಟೆಯ ಈರಣ್ಣ ಬಡಿಗೇರ ಅವರಿಗೆ ಶ್ರೇಷ್ಠ ಶಿಲಾ ಶಿಲ್ಪಿ, ಮುಳ್ಳೂರಿನ ಲಕ್ಷ್ಮಣ ಬಡಿಗೇರ ಅವರಿಗೆ ಶ್ರೇಷ್ಠ ರಥಶಿಲ್ಪಿ, ಶಲವಡಿಯ ಮುದಕಪ್ಪ ಬಡಿಗೇರ ಅವರಿಗೆ ಶ್ರೇಷ್ಠ ಲೋಹ ಶಿಲ್ಪಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಯಚ್ಚರಸ್ವಾಮಿಗಳು ಹಾಗೂ ನವಲಗುಂದ ನಾಗಲಿಂಗ ಮಠದ ವೀರೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವಿಕಾಸ ಸಂಸ್ಥೆಯ ಅಧ್ಯಕ್ಷ ಪಾಂಡುರಂಗ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಜಗದೀಶ ಬ್ಯಾಡಗಿ, ಬಾಲವಿಕಾಸ ವಿದ್ಯಾ ಮಂದಿರದ ಬಿ.ಆರ್. ಬಡಿಗೇರ, ಯಚ್ಚರಪ್ಪ ಪತ್ತಾರ, ವಿಶ್ವಕರ್ಮ ಸಮಾಜದ ಬದಾಮಿ ತಾಲೂಕಾಧ್ಯಕ್ಷ ಪ್ರಲ್ಹಾದ ಅಕ್ಕಸಾಲಿಗರ, ಕಾಳಿಕಾದೇವಿ ಸಮಿತಿ ಅಧ್ಯಕ್ಷ ಯೋಗೇಶ ಕಮ್ಮಾರ, ಮುಸಿಗೇರಿ ಟ್ರಸ್ಟ್ ಅಧ್ಯಕ್ಷ ಮೌನೇಶ ಅಕ್ಕಸಾಲಿಗರ, ಸಂಸ್ಥೆಯ ಕಾರ್ಯದರ್ಶಿ ಮೌನೇಶ ಬಡಿಗೇರ, ಮಹಿಳಾ ಮಂಡಳ ಅಧ್ಯಕ್ಷೆ ಪಾರ್ವತಿ ಕಮ್ಮಾರ, ಯುವಕ ಮಂಡಳದ ಸಂತೋಷ ಬಡಿಗೇರ, ಇತರರು ಉಪಸ್ಥಿತರಿದ್ದರು.