ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಲಹೆ, ಮಧುಗಿರಿ ತಾಲೂಕು ಬ್ರಾಹ್ಮಣ ಸಭಾ ಉದ್ಘಾಟನೆ
ಮಧುಗಿರಿ: ಸಮುದಾಯದ ಒಳಿತಿಗೆ ಸಂಘಟನೆ ಅಗತ್ಯವಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ರಸ್ತೆಯಲ್ಲಿರುವ ವಿಪ್ರ ಸೇವಾ ಟ್ರಸ್ಟ್ನ ಬ್ರಾಹ್ಮಣ ವಿದ್ಯಾರ್ಥಿನಿಲಯದ ಕಟ್ಟಡದಲ್ಲಿ ಭಾನುವಾರ ನೂತನವಾಗಿ ರಚನೆಯಾಗಿರುವ ತಾಲೂಕು ಬ್ರಾಹ್ಮಣ ಸಭಾವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಸಭೆಗಳನ್ನು ನಡೆಸುವ ಮೂಲಕ ಸಮುದಾಯ ಸಂಘಟಿತವಾಗಬೇಕು. ಬ್ರಾಹ್ಮಣ ಸಮುದಾಯಕ್ಕೆ ವಿದ್ಯೆ ರಕ್ತಗತವಾಗಿ ಬಂದಿದ್ದು, ಯುವಕರು ಹೆಚ್ಚು ವಿದ್ಯಾವಂತರಾಗಬೇಕು. ಅಧಿಕಾರ ಪಡೆಯಲು ಯುವ ಸಮುದಾಯ ರಾಜಕೀಯ ಕ್ಷೇತ್ರಕ್ಕೂ ಬರಬೇಕು ಎಂದರು.
ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ಕೊಡಿಸಲು ನಾನು ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿದ್ದಾರೆ ಎಂದರು. ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಅಧ್ಯಕ್ಷ ಎಸ್.ರಘುನಾಥ್ ಮಾತನಾಡಿ, ಈ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಿರಿಯರ ಮಾರ್ಗದರ್ಶನದಲ್ಲಿ ಇಲ್ಲಿನ ಬ್ರಾಹ್ಮಣರನ್ನು ಸಂಘಟಿಸುವ ಮೂಲಕ ರಾಜ್ಯ ಸಂಘಕ್ಕೂ ಹೆಚ್ಚು ಸದಸ್ಯರನ್ನು ಸೇರ್ಪಡೆಗೊಳಿಸುವಂತೆ ಮನವಿ ಮಾಡಿದರು.ಬ್ರಾಹ್ಮಣರು ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ನಡವಳಿಕೆ ತಿಳಿವಳಿಕೆ ಹೆಚ್ಚಿಸಿಕೊಳ್ಳಬೇಕು. ತಾಲೂಕು ಬ್ರಾಹ್ಮಣ ಸಭಾ ಪ್ರಬಲ ಸಂಘಟನೆಯಾಗಿ ಬೆಳೆಯಲಿ ಎಂದು ಹಾರೈಸಿದರು.
ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಪಿ.ದತ್ತಾತ್ರೇಯ ಮಾತನಾಡಿ, ನಮ್ಮ ಸಮುದಾಯದಲ್ಲಿ ಒಗ್ಗಟ್ಟನ್ನು ಮೂಡಿಸುವುದಕೋಸ್ಕರ ಈ ಸಂಘ ಸ್ಥಾಪನೆಯಾಗಿದೆ. ನಾವೆಲ್ಲ ವಿಪ್ರರು ಎನ್ನುವ ಭಾವನೆ ಮೂಡಿಸಿಕೊಳ್ಳಬೇಕು. ನಮ್ಮ ಸಮುದಾಯದಲ್ಲಿರುವ ಕಡು ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಸಂಘ ಸ್ಥಾಪಿಸಿದ್ದೇವೆ. ಬ್ರಾಹ್ಮಣ ಸಭಾ ರಾಜ್ಯಾಧ್ಯಕ್ಷರು ರಾಜ್ಯ ಸರ್ಕಾರದಿಂದ ಸಿಗುವ ಸೌಕರ್ಯಗಳನ್ನು ಬ್ರಾಹ್ಮಣರಿಗೆ ಕೊಡಿಸಲು ಪ್ರಯತ್ನಿಸಬೇಕು ಎಂದರು. ವಿದ್ವಾಂಸ ಪಾವಗಡ ಪ್ರಕಾಶ್ ರಾವ್ ಮಾತನಾಡಿ, ಬ್ರಾಹ್ಮಣರು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಕಾರ್ಯತ@ ಬ್ರಾಹ್ಮಣರಾದಾಗ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಉದ್ಯೋಗದ ವ್ಯಾಮೋಹದಿಂದ ಪಾಶ್ಚಾತ್ಯರ ಆಕರ್ಷಣೆ ಹೆಚ್ಚಾಗಿ, ಪಾಶ್ಚಾತ್ಯ ಅನುಕರಣೆಯಿಂದಾಗಿ ನಮ್ಮ ಕರ್ಮಗಳನ್ನು ಮಾಡದೆ ಆಚಾರ ವಿಚಾರಗಳಿಂದ ವಿಮುಖರಾಗುತ್ತಿದ್ದೇವೆ.ನಮ್ಮ ಮುಂದಿನ ಪೀಳಿಗೆ ಸಮುದಾಯದ ಸಂಸ್ಕಾರ- ಸಂಪ್ರದಾಯಗಳನ್ನು ಪಾಲಿಸಲು ಸಂಘಟನೆಗಳು ಅಗತ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಮಾಜ ಸೇವೆ ಸಲ್ಲಿಸಿರುವ ಮಹನೀಯರು ಹಾಗೂ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಹಿರಿಯ ಉಪಾಧ್ಯಕ್ಷ ಲಕ್ಷಿ$್ಮಕಾಂತ್, ಉಪಾಧ್ಯಕ್ಷರಾದ ಟಿ.ಎಂ. ಶಿವರಾಂ, ಎಸ್.ಸುದರ್ಶನಂ, ಜಿಲ್ಲಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಜಿಲ್ಲಾ ಪ್ರತಿನಿಧಿ ಹರೀಶ್, ತಾಲೂಕು ಬ್ರಾಹ್ಮಣ ಸಭಾ ಹಿರಿಯ ಸಲಹಾ ಸಮಿತಿಯ ಅಧ್ಯಕ್ಷ ಕೆ.ನಾಗರಾಜ ಶಾಸ್ತ್ರಿ, ಗೌರವ ಉಪಾಧ್ಯಕ್ಷ ಬಿ.ಆರ್.ಸತ್ಯನಾರಾಯಣ, ಕಾರ್ಯದರ್ಶಿ ಬಿ.ಎಸ್.ರವೀಶ್, ನಿರ್ದೇಶಕ ಎಚ್.ವಿ.ಮಂಜುನಾಥ್, ಎಕೆಬಿಎಂಎಸ್ನ ತಾಲೂಕು ಪ್ರತಿನಿಧಿ ಎಸ್.ಎ.ಶ್ಯಾಮನಾಥ್, ಪುರಸಭೆ ಸದಸ್ಯ ಕೆ.ನಾರಾಯಣ್ ಇದ್ದರು.
