More

  ಸಮುದಾಯಕ್ಕೆ ಮೂಡಿಸಿ ಎಚ್‌ಐವಿ ಜಾಗೃತಿ  -ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಹೇಳಿಕೆ – ವಿಶ್ವ ಏಡ್ಸ್ ದಿನಾಚರಣೆ 

  ದಾವಣಗೆರೆ: ಎಚ್‌ಐವಿ ಸೋಂಕಿನ ಹರಡುವಿಕೆ ಪ್ರಮಾಣ ರಾಜ್ಯದಲ್ಲಿ ಶೇ.0.22, ದಾವಣಗೆರೆಯಲ್ಲಿ ಶೇ.0.50ರಷ್ಟಿದೆ. ಇದನ್ನು ನಿಯಂತ್ರಣ ಮಾಡುವತ್ತ ನಾವು ಜಾಗರೂಕರಾಗಬೇಕು. ಸಮುದಾಯದಲ್ಲೂ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
  ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿಪಂ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಎವಿ ಕಮಲಮ್ಮ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  10 ವರ್ಷದ ಹಿಂದೆ ಎಚ್‌ಐವಿ ಸೋಂಕಿತರನ್ನು ಸ್ಪರ್ಶಿಸಲು ಭಯ ಪಡುತ್ತಿದ್ದ ಸಾಮಾಜಿಕ ಕಳಂಕದ ಮನೋಭಾವವಿತ್ತು. ಅದು ಇಂದು ತುಸು ಕಡಿಮೆಯಾಗಿದ್ದರೂ ಸಮಸ್ಯಾತ್ಮಕ ಕಾಯಿಲೆಯಾಗಿದೆ. ಇದನ್ನು ನಿಯಂತ್ರಣ ಮಾಡಬಹುದೇ ಹೊರತು ಸಂಪೂರ್ಣ ಶಮನಕ್ಕೆ ಲಸಿಕೆ ಇಲ್ಲ. ಹಾಗಾಗಿ ಏಡ್ಸ್‌ಮುಕ್ತ ಸಮಾಜ ನಿರ್ಮಾಣಕ್ಕೆ ಸಮುದಾಯ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
  ರಕ್ತದೊತ್ತಡ, ಮಧುಮೇಹ, ಕೋವಿಡ್‌ನಂತಹ ಗುಂಪಿಗೆ ಸೇರದ ಈ ಕಾಯಿಲೆ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಬರಲಿದೆ. ಹದಿಹರೆಯದವರಲ್ಲಿ ಇದು ಹೆಚ್ಚಲಿದೆ. ಮಾದಕ ವ್ಯಸನಿಗಳು, ಬೇರೆಡೆಯಿಂದ ಬಂದ ಯುವಜನರು, ಚಾಲಕರು ಮೊದಲಾದ ಅಪಾಯದ ವರ್ಗದವರು ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.
  ಇತ್ತೀಚೆಗೆ ಸಭೆ ನಡೆಸಿದಾಗ ತಾಯಂದಿರಿಂದ ಮಕ್ಕಳಿಗೂ ಎಚ್‌ಐವಿ ಸೋಂಕು ಹಬ್ಬುವುದು ಹೆಚ್ಚಿರುವುದು ಕಂಡುಬಂದಿದೆ. ಸೂಕ್ತ ಚಿಕಿತ್ಸೆ ಮೂಲಕ ಗರ್ಭಿಣಿಯರಿಂದ ಮಕ್ಕಳಿಗೆ ಈ ಸೋಂಕನ್ನು ಶೂನ್ಯಕ್ಕೆ ತರುವ ಅವಕಾಶವಿದೆ. ಹಾಗಾಗಿ ಜನರು ಏಡ್ಸ್ ಬಗ್ಗೆ ಜಾಗೃತರಾಗಬೇಕು ಎಂದು ತಿಳಿಸಿದರು.
  ಡಿಎಚ್‌ಒ ಡಾ. ಎಸ್. ಷಣ್ಮುಖಪ್ಪ ಮಾತನಾಡಿ ಏಡ್ಸ್ ರೋಗಕ್ಕೆ ಅಂತ್ಯ ಹಾಡುವುದು ನಮ್ಮ ಕೈಯಲ್ಲಿದೆ. ಇದು ಹರಡದಂತೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಸಮದಾಯಕ್ಕೆ ಜಾಗೃತಿ ನೀಡಬೇಕಿದೆ ಎಂದರು.
  ಎಚ್‌ಐವಿ ಪೀಡಿತರಿಗೆ ಎಆರ್‌ಟಿ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ಔಷಧದ ಸೌಲಭ್ಯವಿದೆ. ತಾಯಂದಿರಿಂದ ಮಕ್ಕಳಿಗೆ ಏಡ್ಸ್ ಬಾರದಂತೆ ತಡೆಯುವ ಸೌಲಭ್ಯಗಳೂ ಇವೆ. ಜನಸಮುದಾಯವು ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಗೆ ಬಲ ತುಂಬಿದರೆ ಈ ರೋಗವನ್ನು ತಡೆಯಬಹುದು ಎಂದು ಹೇಳಿದರು.
  ಪ್ರಾಸ್ತಾವಿಕ ಮಾತನಾಡಿದ ಡ್ಯಾಪ್ಕೋ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಪಿ.ಡಿ.ಮುರಳೀಧರ, ಎಚ್‌ಐವಿ ಸೋಂಕಿನ ಪ್ರಮಾಣದಲ್ಲಿ ದಾವಣಗೆರೆ ಜಿಲ್ಲೆ 18ನೇ ಸ್ಥಾನದಲ್ಲಿದೆ. ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದವರೆಗೆ ಕಂಡುಬಂದ ಸೋಂಕಿತರಲ್ಲಿ ಶೇ.0.94 ಸಾಮಾನ್ಯರು ಹಾಗೂ 0.03 ಗರ್ಭಿಣಿಯರಿದ್ದಾರೆ. ಮಾಹಿತಿ ಶಿಕ್ಷಣಕ್ಕಾಗಿ ಜಿಲ್ಲೆಯ 45 ಪದವಿ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್‌ಗಳನ್ನು ಆರಂಭಿಸಲಾಗಿದೆ ಎಂದರು.
  ಕಾಲೇಜಿನ ಪ್ರಾಚಾರ್ಯೆ ಕಮಲಾ ಸೊಪ್ಪಿನ್, ವಿದ್ಯಾರ್ಥಿಗಳು ಹಾಗೂ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರಿಗೂ ಏಡ್ಸ್ ಜಾಗೃತಿಯ ಪ್ರತಿಜ್ಞಾ ವಿಧಿ ಬೋಧಿಸಿದರು. ಏಡ್ಸ್ ನಿಯಂತ್ರಣ ಚಟುವಟಿಕೆ ನಿರತ ಎಂ.ಎಚ್. ಮುರಳೀಧರ, ಹೀನಾ, ಎಚ್. ತಿಪ್ಪೇಸ್ವಾಮಿ, ರವಿಕುಮಾರ್ ಇತರರನ್ನು ಸನ್ಮಾನಿಸಲಾಯಿತು.
  ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ. ನಾಗೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕ ಡಾ.ಎಸ್.ಪಿ.ಮಧು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ರೇಣುಕಾರಾಧ್ಯ, ಚಿಗಟೇರಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಡಿ.ಎಚ್.ಗೀತಾ, ಡಿಡಿಪಿಯು ಕರಿಸಿದ್ದಪ್ಪ, ಆರ್.ಆರ್.ಶಿವಕುಮಾರ್ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ ನಡೆಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts