ಸಮಾರಂಭಗಳಿಗೆ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ

ಮಂಗಳೂರು: ಚುನಾವಣಾ ಪ್ರಚಾರದ ಅನುಮತಿ ಹಾಗೂ ನಾಗರಿಕರು ನಡೆಸುವ ಯಕ್ಷಗಾನ ಸೇರಿದಂತೆ ಸಾರ್ವಜನಿಕರ ಸಮಾರಂಭಗಳಿಗೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅನುಕೂಲ ಮಾಡಿಕೊಡಲು ಏಕಗವಾಕ್ಷಿ ಅನುಮೋದನಾ ವ್ಯವಸ್ಥೆಯನ್ನು ಎಲ್ಲ ಸಹಾಯಕ ಚುನಾವಣಾಧಿಕಾರಿ ಕಚೇರಿಗಳಲ್ಲಿ ಕಲ್ಪಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು.

ಚುನಾವಣಾಧಿಕಾರಿ ಜತೆಗೆ ಪೊಲೀಸ್ ಹಾಗೂ ಆರ್‌ಟಿಒ ಇಲಾಖೆ ಅಧಿಕಾರಿಗಳೂ ಈ ಕಚೇರಿಯಲ್ಲಿ ಇರುತ್ತಾರೆ. ಒಂದೇ ಕಡೆಯಲ್ಲಿ ಅನುಮೋದನೆ ನೀಡಲಾಗುವುದು, ಅದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರಬೇಕಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜಕೀಯೇತರ ಸಭೆ, ಸಮಾರಂಭಗಳಿಗೆ ಯಾವುದೇ ನಿಯಂತ್ರಣ ಇಲ್ಲವಾದರೂ ಸಹಾಯಕ ಚುನಾವಣಾ ಅಧಿಕಾರಿಗೆ ಮುನ್ಸೂಚನೆ ನೀಡುವುದು ಸೂಕ್ತ. ಚುನಾವಣಾ ಪ್ರಚಾರಕ್ಕಾಗಿ ಬಳಸುವ ವಾಹನಗಳ ಕುರಿತು ಚುನಾವಣಾಧಿಕಾರಿಯಿಂದ ಲಿಖಿತ ಅನುಮತಿ ಪಡೆದು ಅದನ್ನು ವಾಹನದಲ್ಲಿ ಪ್ರದರ್ಶಿಸಿ ವಾಹನಗಳನ್ನು ಬಳಸಬಹುದು. ಯಕ್ಷಗಾನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಅಥವಾ ಧಾರ್ಮಿಕ ಕೇಂದ್ರಗಳಲ್ಲಿ ಕಾರ್ಯಕ್ರಮಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲವಾದರೂ ಸೂಕ್ತ ಮಾಹಿತಿ ನೀಡಿ ಮುಚ್ಚಳಿಕೆಯನ್ನು ಪಡೆದುಕೊಳ್ಳುವುದು ಅಗತ್ಯ. ಅಲ್ಲಿ ಯಾವುದೇ ರೀತಿಯ ರಾಜಕೀಯ ಸಂಬಂಧಿ ಚಟುವಟಿಕೆಗಳು ನಡೆಯುವುದಿಲ್ಲ ಎಂಬುದನ್ನು ಖಾತ್ರಿಪಡಿಸುವುದಕ್ಕಾಗಿ ಹಾಗೂ ಇಂತಹ ಕಾರ್ಯಕ್ರಮಗಳ ಬಗ್ಗೆ ದೂರು ಬಂದಾಗ ಪರಿಶೀಲನೆಗೆ ಇದು ಸಹಕಾರಿಯಾಗುತ್ತದೆ ಎನ್ನುವ ರೀತಿಯಲ್ಲಿ ಈ ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂದರು.

ಆಭರಣ, ನಗದು ದಾಖಲೆ ಇರಲಿ!: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಕೂಡ ಚಿನ್ನಾಭರಣ ಹಾಗೂ ನಗದನ್ನು ಸಾಗಿಸುವ ಸಂದರ್ಭ ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. 50 ಸಾವಿರ ರೂ.ಗೆ ಹೆಚ್ಚಿನ ಮೊತ್ತ ಸಾಗಿಸುವಾಗ ಜತೆಯಲ್ಲಿ ರಾಜಕೀಯ ಪಕ್ಷಗಳ ಯಾವುದೇ ಕುರುಹು ಇದ್ದರೂ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಆದರೆ ಅಂಥದ್ದೇನೂ ಇಲ್ಲ ಹಾಗೂ ಸೂಕ್ತ ದಾಖಲೆ ಇದೆ ಎಂದಾದರೆ ಚಿಂತೆ ಬೇಡ ಎಂದರು.

ಅಭ್ಯರ್ಥಿಗಳಿಗೆ ಸೂಚನೆ: ರಾಜಕೀಯ ಪಕ್ಷ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ನಡೆಸುವ ಸಭೆ, ಮೆರವಣಿಗೆ ಮತ್ತು ಧ್ವನಿವರ್ಧಕಗಳ ಕುರಿತು ಸ್ಥಳೀಯ ಪೊಲೀಸರಿಂದ ಲಿಖಿತ ಅನುಮತಿ ಪಡೆದು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಉಪಯೋಗಿಸಬಹುದು. ಇದರ ಜತೆಗೆ ಉಪಯೋಗಿಸುವ ಕಟ್ಟಡ, ಮೈದಾನದ ಬಗ್ಗೆಯೂ ಸಂಬಂಧಪಟ್ಟವರಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದವರು ಹೇಳಿದರು.

ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್, ಜಿ.ಪಂ ಸಿಇಒ ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಡಿಸಿಪಿ ಹನುಮಂತರಾಯ ಉಪಸ್ಥಿತರಿದ್ದರು.

ಹತ್ತು ಸಾವಿರಕ್ಕೂ ಅಧಿಕ ಬ್ಯಾನರ್ ತೆರವು!: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೊಂಡಾಗಿನಿಂದ ಬುಧವಾರವರೆಗೆ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿದ್ದ 10187 ಬ್ಯಾನರ್, ಪೋಸ್ಟರ್, ಬಂಟಿಂಗ್ಸ್, ಗೋಡೆ ಬರಹಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಾರ್ವಜನಿಕ ಸ್ಥಳದಲ್ಲಿದ್ದ 10 ಗೋಡೆ ಬರಹ, 1901 ಪೋಸ್ಟರ್, 4376 ಬ್ಯಾನರ್ ಹಾಗೂ ಇತರ 3900 ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ. ಖಾಸಗಿ ಸ್ಥಳಗಳಲ್ಲಿ 156 ಪೋಸ್ಟರ್, 65 ಬ್ಯಾನರ್ ಹಾಗೂ ಇತರ 487 ಸೇರಿದಂತೆ ಒಟ್ಟು 708 ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ವೋಟರ್ ಹೆಲ್ಪ್‌ಲೈನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹಳಷ್ಟು ಮಂದಿ 1025ರಷ್ಟು ಮಾಹಿತಿ ಕೇಳಿ ಅಭಿಪ್ರಾಯಗಳು ಬಂದಿವೆ. ಸಾರ್ವಜನಿಕರು ಸಿವಿಜಿಲ್ ಆ್ಯಪ್ ಮೂಲಕ ಚುನಾವಣಾ ನೀತಿ ಸಂಹಿತೆಗೆ ಉಲ್ಲಂಘಿಸಿ ಫೋಟೋ ಹಾಗೂ ವೀಡಿಯೋ ಸಹಿತ ದೂರುಗಳನ್ನು ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಾ.16ರವರೆಗೆ ಮತದಾರರ ನೋಂದಣಿ: ಚುನಾವಣಾ ಆಯೋಗದ ನಿರ್ದೇಶನದಂತೆ 1-1-2019ಕ್ಕೆ 18 ವರ್ಷ ತುಂಬುವ ಹಾಗೂ ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸದೇ ಇರುವ ಸಾರ್ವಜನಿಕರು ತಮ್ಮ ಹೆಸರನ್ನು ಮಾ.16ರವರೆಗೆ ನೋಂದಾಯಿಸಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಉಚಿತ ದೂರವಾಣಿ ಸಂಖ್ಯೆ 1950ನ ಸಹಾಯ ಪಡೆಯಬಹುದು. ಚುನಾವಣಾಧಿಕಾರಿಯವರ ವೆಬ್‌ಸೈಟ್ ್ಞ.ಜ್ಞಿಮೂಲಕ ಆನ್‌ಲೈನ್ ಮನವಿಯನ್ನೂ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

19ರಿಂದ 26 ನಾಮಪತ್ರ ಸಲ್ಲಿಕೆ: ಮಾ.19ರಿಂದ 26ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಬೆಳಗ್ಗೆ 11ರಿಂದ 3 ಗಂಟೆವರೆಗೆ ನಾಮಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯ 3ನೇ ಮಹಡಿಯಲ್ಲಿರುವ ಕೋರ್ಟ್ ಹಾಲ್‌ನಲ್ಲಿ ಅಭ್ಯರ್ಥಿ ಅಥವಾ ಸೂಚಕರು (ಒಟ್ಟು ಐದು ಮಂದಿ ಮೀರದಂತೆ) ಚುನಾವಣಾಧಿಕಾರಿ(ಜಿಲ್ಲಾಧಿಕಾರಿ) ಮತ್ತು ಸಹಾಯಕ ಚುನಾವಣಾಧಿಕಾರಿ(ಅಪರ ಜಿಲ್ಲಾಧಿಕಾರಿ)ಗೆ ಸಲ್ಲಿಸಬಹುದು.

337 ಲೀಟರ್ ಮದ್ಯ ವಶ: ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು 337 ಅಕ್ರಮ ಮದ್ಯ ಹಾಗೂ ಒಂದು ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಸಿವಿಜಿಲ್ ಆ್ಯಪ್‌ನಡಿ 5 ದೂರುಗಳು ದಾಖಲಾಗಿದ್ದು, ಅಬಕಾರಿ ಕಾಯ್ದೆಯಡಿ 52 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.