ಸಮಾನ ಶಿಕ್ಷಣ ನೀತಿ ಅವಶ್ಯ

ದೊಡ್ಡಬಳ್ಳಾಪುರ: ಸಂವಿಧಾನದಲ್ಲಿ ಅಂಗೀಕೃತವಾಗಿರುವ ಎಲ್ಲ ಭಾಷೆಗಳಿಗೂ ಸಮಾನ ಮಾನ್ಯತೆ ಇದ್ದು, ಈ ದಿಸೆಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಿ ಸಮಾನ ಶಿಕ್ಷಣ ನೀತಿ ಜಾರಿಗೊಳಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೊ›.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್​ಎಸ್​ಎಸ್, ಎನ್​ಸಿಸಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್​ಕ್ರಾಸ್ ಚಟುವಟಿಕೆ ಸಮಾರೋಪದಲ್ಲಿ ಮಾತನಾಡಿದರು.

ಸಂವಿಧಾನ ಅಂಗೀಕರಿಸಿರುವ 22 ಭಾಷೆಗಳು ಸಹ ರಾಷ್ಟ್ರಭಾಷೆಗಳಗಿವೆ. ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡುತ್ತಿಲ್ಲ. ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡದಿರುವ ಪರಿಣಾಮ ಉದ್ಯೋಗ ಅನ್ಯ ರಾಜ್ಯದವರ ಪಾಲಾಗುತ್ತಿವೆ ಎಂದು ಬೇಸರಿಸಿದರು.

ಕರ್ನಾಟಕ ಮೂಲದ ಬ್ಯಾಂಕ್​ಗಳಲ್ಲಿಯೂ ಸಹ ಕನ್ನಡಿಗರಿಗೆ ಉದ್ಯೋಗ ದೊರೆಯದಿರುವುದು ವಿಷಾದಕರ. ವ್ಯಾಪಾರೀಕರಣದ ಪ್ರಭಾವ ಇಂದು ನೆಲದ ಭಾಷೆಗೆ ಕುತ್ತಾಗುತ್ತಿದೆ. ಉದ್ಯೋಗ ವಂಚಿತ ಯುವಕರು ಸಮಾಜ ಘಾತುಕರಾಗುತ್ತಿದ್ದಾರೆ ಎಂದರು.

ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಇಂದು ಉನ್ನತ ಶಿಕ್ಷಣ ಬೆಳೆಯುತ್ತಿದೆ. ರಾಜ್ಯದಲ್ಲಿ 412 ಸರ್ಕಾರಿ ಕಾಲೇಜುಗಳಿವೆ. ಆದರೆ ಶಿಕ್ಷಣದಲ್ಲಿ ಪಠ್ಯದ ಬೋಧನೆಗಷ್ಟೆ ಒತ್ತು ನೀಡಲಾಗುತ್ತಿದೆ. ವಿಷಯ ಪರಿಣಿತರನ್ನಾಗಿಸಿದರೆ ಶಿಕ್ಷಣದ ಜವಾಬ್ದಾರಿ ಸಾಫಲ್ಯವಾಗುವುದಿಲ್ಲ. ಮಾನವೀಯ ಚಿಂತನೆ ನೆಲೆಗಟ್ಟಿನಲ್ಲಿ ಚಿಂತನೆ ಹಾಗೂ ಆಲೋಚನೆ ಬೆಳೆಸಬೇಕಿದೆ ಎಂದು ಹೇಳಿದರು.

ವೃತ್ತಿಪರ ಕೋರ್ಸ್​ಗಳು ತಾಂತ್ರಿಕ ಶಿಕ್ಷಣ ಬಡಜನತೆಗೆ ದೊರೆಯುತ್ತಿಲ್ಲ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹ ಹೊಣೆಯಾಗಿದ್ದು, ರಾಜಕೀಯ ಇಚ್ಛಾಶಕ್ತಿ ಕೊರತೆಯಿದೆ. ಮೌಲ್ಯಾಧಾರಿತ ಉನ್ನತ ಶಿಕ್ಷಣ ಪಡೆದು ಹೊರಬರುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಸಮಾಜಕ್ಕೆ ಸುಸಂಸ್ಕೃತ ವ್ಯಕ್ತಿಗಳನ್ನಾಗಿ ರೂಪಿಸುವುದು ಶಿಕ್ಷಣದ ಜವಾಬ್ದಾರಿ ಆಗಬೇಕಿದ್ದು, ಈ ಬಗ್ಗೆ ಗಂಭೀರ ಚಿಂತನೆ ಅಗತ್ಯವಾಗಿದೆ ಎಂದರು.

ಉದ್ಯಮಿ ಕಿಶನ್ ಲಾಲ್ ಚಂಪಾಲಾಲ್ ಜೈನ್ ಮಾತನಾಡಿ, ಶಿಕ್ಷಣದ ಅವಕಾಶ ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು. ನಮ್ಮ ವ್ಯಕ್ತಿತ್ವ ಹಾಲಿನಂತಿರಬೇಕು. ಅದಕ್ಕೆ ಸ್ವಲ್ಪ ಹುಳಿ ಹಿಂಡಿದರೆ ಒಡೆಯುತ್ತದೆ. ಗಾಂಧಿ, ಸ್ವಾಮಿ ವಿವೇಕಾನಂದ ಮೊದಲಾದ ಮಹನೀಯರು ಸಹ ಎಲ್ಲರಂತೆಯೇ ಇದ್ದು ಸಾಧನೆ ಮಾಡಿದ್ದು, ಇಂತಹವರು ನಮಗೆ ಸ್ಪೂರ್ತಿಯಾಗಬೇಕು ಎಂದರು.

ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿ, ಜ್ಞಾನಾರ್ಜನೆಗೆ ಯಾವುದೇ ಮಡಿವಂತಿಕೆ ಇರಬಾರದು. ಇಂಗ್ಲಿಷ್ ಭಾಷೆ ಕಲಿಕೆ ನಮ್ಮ ಜ್ಞಾನಾರ್ಜನೆಗೆ ಪೂರಕವಾಗಬೇಕು. ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಂಡು ನಮಗೆ ನಾವೇ ಮಾರ್ಗದರ್ಶಿಗಳಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಎಸ್.ಪಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಬೋಧಕೇತರ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ನಾರಾಯಣಸ್ವಾಮಿ ದಂಪತಿಯನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Leave a Reply

Your email address will not be published. Required fields are marked *