ಸಮಾನತೆಗೆ ಹೋರಾಡಿದ ಚೌಡಯ್ಯ

ಹಾವೇರಿ: ನಿಜಶರಣ ಅಂಬಿಗರ ಚೌಡಯ್ಯನವರು ‘ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು, ನಂಬಿದರೆ ಒಂದೇ ಹುಟ್ಟಿನಲ್ಲಿ ಕಡೇ ಹಾಯಿಸುವನು ಈ ಅಂಬಿಗ’ ಎಂದು ತಮ್ಮ ವಚನಗಳಲ್ಲಿ ನೇರ ಹಾಗೂ ಕಠೋರವಾಗಿ ಹೇಳಿರುವ ಧೀಮಂತ ಶರಣ. ಅಲ್ಲದೆ, ಅಂದಿನ ಕಾಲದಲ್ಲಿಯೇ ಸಮಾನತೆಗಾಗಿ ರಾಜರು ಮತ್ತು ಸಾಮಾನ್ಯ ಜನರನ್ನು ಒಂದೇ ದೋಣಿಯಲ್ಲಿ ಕುಳ್ಳಿರಿಸಿ ನದಿ ದಾಟಿಸಿದವರು ಎಂದು ಬಾಲೆಹೊಸೂರನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ನರಸೀಪುರ ಬಳಿ ತುಂಗಭದ್ರಾ ನದಿ ತಟದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನಡೆಯುತ್ತಿರುವ ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವ, ಪ್ರಥಮ ಮಹಾರಥೋತ್ಸವ, ಲಿಂ. ಶಾಂತಮುನಿ ಸ್ವಾಮೀಜಿಗಳ ತೃತೀಯ ಸ್ಮರಣೋತ್ಸವ, ಶ್ರೀಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳ ದ್ವಿತೀಯ ವರ್ಷದ ಪೀಠಾರೋಹಣ ಮಹೋತ್ಸವದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿಜಶರಣ ಅಂಬಿಗರ ಚೌಡಯ್ಯನವರು ಮಾನವನ ಸಂಸಾರವೆಂಬ ಭವಸಾಗರವನ್ನು ದಾಟಿಸಲು ತಮ್ಮ ವಚನಗಳ ಮೂಲಕ ಸಾಕಷ್ಟು ಶ್ರಮಿಸಿದ್ದಾರೆ. ನಿಜಶರಣ ಅಂಬಿಗರ ಚೌಡಯ್ಯನವರ ಪೀಠಕ್ಕೆ ಬಂಗಾರದಂತಹ ಸ್ವಾಮೀಜಿಗಳು ದೊರೆತಿರುವುದು ಸಮಾಜದ ಪುಣ್ಯವಾಗಿದೆ. ಶ್ರೀಗಳು ಸ್ವಲ್ಪ ಸಮಯದಲ್ಲಿಯೇ ಮಠದ ಅಭಿವೃದ್ಧಿಯ ಜೊತೆಗೆ ಸಮಾಜದ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪೀಠದ ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವ ಹಾಗೂ ನೂತನ ಮಹಾರಥೋತ್ಸವ ಹಮ್ಮಿಕೊಂಡಿರುವುದು ಭಕ್ತರು ಒಗ್ಗೂಡಲು ಅನುಕೂಲವಾಗಿದೆ ಎಂದರು. ಶಾಸಕ ಹಾಗೂ ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಉತ್ತಮ ಶಿಕ್ಷಣ ಮುಖ್ಯ. ಅಂತಹ ಕಾರ್ಯವನ್ನು ಪೀಠವು ಮಾಡಲು ಮುಂದಾಗಿರುವುದು ಸಂತಸ ತಂದಿದೆ ಎಂದರು. ಅಂಬಿಗರ ಚೌಡಯ್ಯನ ಗುರುಪೀಠದ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಗುರುಪೀಠದ ನೂತನ ವೆಬ್​ಸೈಟ್​ನ್ನು ಬಿಡುಗಡೆಗೊಳಿಸಲಾಯಿತು. ಶಿರೂರನ ಬಸವಲಿಂಗ ಸ್ವಾಮೀಜಿ, ಸಿಂಧಗಿಯ ಶಾಂತಗಂಗಾಧರ ಸ್ವಾಮೀಜಿ, ಗುಡ್ಡದಾನ್ವೇರಿಯ ಶಿವಯೋಗಿ ಸ್ವಾಮೀಜಿ, ಗುತ್ತಲದ ಗುರುಸಿದ್ಧ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.

ಶಾಸಕ ಹಾಗೂ ಅರಣ್ಯ ಮತ್ತು ಪರಿಸರ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾರಾಯಣರಾವ, ಮಾಜಿ ಶಾಸಕ ಬಿ.ಪಿ. ಹರೀಶ, ಮಾತನಾಡಿದರು. ರಾಜ್ಯ ಗಂಗಾಮತ ಸಮಾಜದ ಅಧ್ಯಕ್ಷ ಬಿ. ಮೌಲಾಲಿ, ನಾಗಾಬಾಯಿ ಬುಳ್ಳಾ, ಶರಣಪ್ಪ ಮನೇಗಾರ, ಜಗನ್ನಾಥ ಜಮಾದಾರ ವಸಂತಮ್ಮ ಕೆ. ಶಿವಲಿಂಗಪ್ಪ, ಬಾಬುರಾವ ಜಮಾದಾರ, ಮಂಜುನಾಥ ಭೋವಿ, ಡಾ. ಸಂಜಯ ಡಾಂಗೆ, ಎಚ್.ಎಂ. ದಂಡಿನ, ಕೃಷ್ಣಮೂರ್ತಿ ವಡ್ನಿಕೊಪ್ಪ ಇತರರಿದ್ದರು.

ಗುರುಪೀಠದ ಕಾರ್ಯಾಧ್ಯಕ್ಷ ಬಸವರಾಜ ಸಪ್ಪನಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಯಟ್ ಪ್ರಾಚಾರ್ಯ ಎಂ.ಬಿ. ಅಂಬಿಗೇರ ಸ್ವಾಗತಿಸಿದರು.

ಭಕ್ತರಿಂದ ಪುಣ್ಯಸ್ನಾನ

ಈ ವರ್ಷದಿಂದ ಆರಂಭಗೊಂಡ ನರಸೀಪುರದ ನಿಜ ಶರಣ ಅಂಬಿಗರ ಚೌಡಯ್ಯನವರ ರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ರಥೋತ್ಸವಕ್ಕೆ ಬಂದ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಮಠದಿಂದ ಭಕ್ತರಿಗೆ ವಿಶೇಷವಾಗಿ ಹೋಳಿಗೆ, ಗೋಧಿ ಹುಗ್ಗಿ, ಕಡಕ್ ರೊಟ್ಟಿಯ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.