ಸಮಾಜ ಬದಲಾವಣೆಗೆ ಉದ್ಯಮಿಗಳು ಕೊಡುಗೆ ನೀಡಿ

ಆನೇಕಲ್: ವ್ಯಾಪಾರದ ಅಭಿವೃದ್ಧಿ ಜತೆಗೆ ಉದ್ಯಮಿಗಳು ಸಮಾಜದಲ್ಲಿ ಧಾರ್ವಿುಕ, ಸಾಮಾಜಿಕ, ಆರ್ಥಿಕ ಬದಲಾವಣೆಗೆ ಕೊಡುಗೆ ನೀಡಬೇಕು ಎಂದು ಕವಿ ಕೆ.ಎಸ್.ನಿಸಾರ್ ಅಹಮದ್ ಹೇಳಿದರು.

ತಾಲೂಕಿನ ಸಮಂದೂರು ಗ್ರಾಪಂ ವ್ಯಾಪ್ತಿಯ ತಿಮ್ಮಸಂದ್ರ ಗೇಟ್ ಬಳಿ ಎಸ್​ಎಸ್​ಎನ್ ಪ್ರತಿಷ್ಠಾನದಿಂದ ಸೋಮವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಸಣಾ ಶಿಬಿರ ಹಾಗೂ ಸಾಂಸ್ಕೃತಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉದ್ಯಮಿಗಳು ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಕನ್ನಡ ಭಾಷೆ, ಸಂಸ್ಕೃತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ದಿಸೆಯಲ್ಲಿ ಎಸ್​ಎಸ್​ಎನ್ ಪ್ರತಿಷ್ಠಾನ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಆದರ್ಶವಾಗಿದೆ ಎಂದರು.

ವೈದ್ಯಕೀಯ ತಪಾಸಣೆ ಶಿಬಿರ, ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಹಾಗೂ ಉಚಿತ ವೈದ್ಯಕೀಯ ಮಾರ್ಗದರ್ಶನ ನೀಡುವ ಮೂಲಕ ರಚನಾತ್ಮಕ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಮಾದರಿಯಾಗಿದೆ ಎಂದರು.

ಎಸ್​ಎಸ್​ಎನ್ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ಎಸ್.ರಾಜಶೇಖರ್ ಮಾತನಾಡಿ, ಪಾಲಕರು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಆ ಸಂಸ್ಕಾರದ ಬೆಳಕು ಅವರ ಜೀವನದ ಹಾದಿಯನ್ನು ಹಸನು ಮಾಡುತ್ತದೆ ಎಂದರು.

ಕವಿ ಎಚ್.ಡುಂಡಿರಾಜ್ ಹಾಸ್ಯ ಕವನಗಳು ಮತ್ತು ಚುಟುಕು ಕವಿತೆ ವಾಚಿಸಿದರು. ಸಂಸ್ಥೆ ಸಂಸ್ಥಾಪಕ ಕೆ.ಆರ್.ಸೋಮಶೇಖರ್, ಪದಾಧಿಕಾರಿಗಳಾದ ನಾಗರತ್ನಾ, ನಂದಿನಿ, ಚಂದ್ರಶೇಖರ್, ವಿಧಾತ್ ವಿದ್ಯಾ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ತಾ.ನಂ.ಕುಮಾರಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ಕಂಠೀರವ ನೃತ್ಯ ಸಭಾ ಅಧ್ಯಕ್ಷ ಪಿ.ಧನಂಜಯ ಮತ್ತಿತರರಿದ್ದರು.

Leave a Reply

Your email address will not be published. Required fields are marked *