ಸಮಾಜಸೇವೆಯಿಂದ ಜೀವನ ಸಾರ್ಥಕ

ಕಡೂರು: ಹುಟ್ಟು ಸಾವಿನ ಮಧ್ಯೆ ಮನುಷ್ಯ ಸಮಾಜಮುಖಿಯಾಗಿ ಬದುಕಿದರೆ ಅದೇ ಸಾರ್ಥಕ ಜೀವನ ಎಂದು ಮಾಜಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಹೇಳಿದರು.

ಬುಧವಾರ ಮಾಜಿ ಶಾಸಕ ದಿ. ಕೆ.ಎಂ.ಕೃಷ್ಣಮೂರ್ತಿ ಅವರ ತಾಯಿ ಜಯಮ್ಮ ಅವರ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕಿನಲ್ಲಿ ಪ್ರೀತಿ ಮತ್ತು ಗೌರವ ಸಂಪಾದಿಸಬೇಕು. ಧರ್ಮದ ಹೊರತಾದ ಮಾನವೀಯ ಅಂತಃಕರಣ ಇರುವ ಪ್ರೀತಿ ಮುಖ್ಯ. ಆತ್ಮೀಯ ಸಂಬಂಧ ಮತ್ತು ಒಳಿತನ್ನು ಮಾಡುವ ಗುಣ ರೂಢಿಸಿಕೊಳ್ಳಬೇಕು ಎಂದರು.

ಜಯಮ್ಮ ಅವರ ಪತಿ ಕೆ.ಎಚ್.ಮುದಿಯಪ್ಪ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಶಾಸಕ. ಅವರಿಗೆ ಆಸ್ತಿ ಮತ್ತು ಅಧಿಕಾರದ ಆಸೆ ಇರಲಿಲ್ಲ. ದೇಶಕ್ಕೆ ಒಳಿತನ್ನು ಮಾಡಬೇಕೆಂಬ ಸಂಕಲ್ಪವಿತ್ತು. ತ್ಯಾಗದ ಅವರ ಜೀವನ ಇಂದಿನ ಸಮಾಜಕ್ಕೆ ಮಾದರಿ. ಕೆ.ಎಂ.ಕೃಷ್ಣಮೂರ್ತಿ ನಾಲ್ಕು ಬಾರಿ ಶಾಸಕರಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಅನೇಕ ರಾಜಕಾರಣಿಗಳು ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುತ್ತಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಬಡಾಯಿ ಕೊಚ್ಚಿಕೊಳ್ಳುತ್ತ, ಧರ್ಮ ವಿರೋಧಿಸುತ್ತ ಅಧಿಕಾರ ಅನುಭವಿಸುತ್ತಿದ್ದಾರೆ. ಅಂತಹವರಿಗೆ ಮಣೆ ಹಾಕಬಾರದು ಎಂದು ಪರೋಕ್ಷವಾಗಿ ಮೋದಿ ಅವರನ್ನು ಟೀಕಿಸಿದರು.

ಜಿಪಂ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು ಮಾತನಾಡಿ, 91ವರ್ಷದ ತುಂಬು ಜೀವನ ನಡೆಸಿದ ನನ್ನ ತಾಯಿ ಈ ಕ್ಷೇತ್ರದ ಬಹಳಷ್ಟು ಜನರಿಗೆ ಚಿರ ಪರಿಚಿತರಾಗಿದ್ದರು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯ್ಕುಮಾರ್, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕ ಜಿ.ಎಸ್.ಶ್ರೀನಿವಾಸ್, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿದರು.

ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಜಿಲ್ಲಾ ವಕ್ತಾರ ಎ.ಎನ್.ಮಹೇಶ್, ಕಡೂರು ಬ್ಲಾಕ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಬೀರೂರು ಬ್ಲಾಕ್ ಅಧ್ಯಕ್ಷ ಆಸಂದಿ ಕಲ್ಲೇಶ್, ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷೆ ಭಾರತಮ್ಮ, ಮಾಜಿ ಅಧ್ಯಕ್ಷೆ ರೇಣುಕಾಉಮೇಶ್, ಉಪಾಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ಪುರಸಭಾ ಅಧ್ಯಕ್ಷ ಎಂ.ಮಾದಪ್ಪ, ಸದಸ್ಯರಾದ ಮೋಹನ್​ಕುಮಾರ್, ಎನ್.ಬಷೀರ್​ಸಾಬ್ ಇತರರು ಇದ್ದರು.

ಭ್ರಮೆಯಿಂದ ಹೊರಬರಲಿ: ಸಮ್ಮಿಶ್ರ ಸರ್ಕಾರಕ್ಕೆ ಯಾವ ಅಪಾಯವೂ ಇಲ್ಲ. ಬಿಜೆಪಿ ಮುಖಂಡರು ಭ್ರಮೆಯಿಂದ ಹೊರ ಬರಬೇಕು. ಬಿಜೆಪಿ ಮುಖಂಡರಿಗೆ ರೈತರ ಕಷ್ಟವಾಗಲೀ, ಜನರ ನೋವಾಗಲೀ ಕಾಣುತ್ತಿಲ್ಲ. ಮೋಜು ಮಸ್ತಿ ಮಾಡಲು ರೆಸಾರ್ಟ್​ಗೆ ಹೋಗಿದ್ದಾರೆ. ಕನಿಷ್ಠ ಬದ್ಧತೆಯಿಲ್ಲದ ರಾಜಕಾರಣ ಅವರದು ಎಂದು ಸಿದ್ದರಾಮಯ್ಯ ಹರಿಹಾಯ್ದರು. ಸಚಿವರೇ ತಮ್ಮ ಸ್ಥಾನ ತ್ಯಾಗ ಮಾಡಿ ಇತರರಿಗೆ ಅವಕಾಶ ಮಾಡಿಕೊಡುವ ಉದಾರತನ ತೋರಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.