ಸಮಾಜವನ್ನು ಸರಿದಾರಿಗೆ ತನ್ನಿರಿ

ಹುಬ್ಬಳ್ಳಿ: ಸಮಾಜ ಹಾಗೂ ಜನರು ದಾರಿ ತಪ್ಪಿದಾಗ ಸ್ವಾಮೀಜಿಗಳು ಬೆತ್ತದೇಟು ನೀಡಿ ಸರಿ ದಾರಿಗೆ ತರಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಹೇಳಿದರು.

ಮಣಕವಾಡದ ಶ್ರೀ ಸಿದ್ಧರಾಮ ದೇವರ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾಮೀಜಿಗಳು ಸಮಾಜ ಹಾಗೂ ಧರ್ಮ ಜಾಗೃತಿಗೆ ಬಹಳ ಕಷ್ಟ ಪಡುತ್ತಾರೆ. ಹೀಗಾಗಿ ಅವರಲ್ಲಿ ದೇವರನ್ನು ಕಾಣುತ್ತೇವೆ. ಕೋಟಿಗಟ್ಟಲೇ ಹಣವಿದ್ದವರೂ ಸ್ವಾಮೀಜಿಗಳಿಗೆ ಮಂಡಿ ಊರಿ ನಮಸ್ಕರಿಸುತ್ತಾರೆ ಎಂದರೆ ಅವರ ಮಾರ್ಗದರ್ಶನ, ಸಮಾಜ ಜಾಗೃತಿ ಕಾರಣ ಎಂದರು.

ಸನ್ಯಾಸತ್ವ ಸ್ವೀಕರಿಸಿದ ಮೇಲೆ ಅನೇಕ ಸ್ವಾಮೀಜಿಗಳ ಜೀವನದಲ್ಲಿ ಅವಘಡಗಳು ನಡೆದಿವೆ ಎನ್ನುವುದನ್ನು ನಾವು ಮಾಧ್ಯಮದಿಂದ ತಿಳಿದುಕೊಂಡಿದ್ದೇವೆ. ಆದರೆ, ಶ್ರೀ ಸಿದ್ಧರಾಮ ದೇವರು ಪಟ್ಟಾಧಿಕಾರ ಸ್ವೀಕರಿಸುವುದಕ್ಕೂ ಮುನ್ನ 6 ವರ್ಷಗಳ ಕಾಲ ಪಟ್ಟದ ಸ್ವಾಮೀಜಿಯಂತೆ ಸಮಾಜ ಸೇವೆ ಮಾಡಿ ಜನರ ಪ್ರೀತಿ ಗಳಿಸಿದ್ದಾರೆ. ನವಲಗುಂದದಲ್ಲಿ ಬರಗಾಲವಿದ್ದರೂ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಕಾರ್ಯಕ್ರಮ ಅಚ್ಚು ಕಟ್ಟಾಗಿ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಇಂತಹ ದೊಡ್ಡ ಕಾರ್ಯಕ್ರಮ ನಾನು ನೋಡಿರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಮಂತರಾಗಿದ್ದರೆ ಸಾಮಾನ್ಯವಾಗಿ ಗೋಡಂಬಿ, ದ್ರಾಕ್ಷಿ ತುಲಾಭಾರ ಮಾಡುತ್ತಾರೆ. ಆದರೆ, ಮಣಕವಾಡದ ಮಹಿಳೆಯರು 800 ಬಾಟಲ್ ರಕ್ತವನ್ನು ತುಲಾಭಾರ ನೀಡಿದ್ದು ರಾಜ್ಯಕ್ಕಷ್ಟೇ ಅಲ್ಲ ಇಡೀ ಭಾರತಕ್ಕೆ ಮಾದರಿಯಾಗಿದೆ. ಈ ಮೂಲಕ ಸಿದ್ಧರಾಮ ದೇವರು ತಾವು ಪಟ್ಟಕ್ಕೇರುವುದಕ್ಕೆ ತಾವು ಎಷ್ಟು ಅರ್ಹರು ಎಂದು ತೋರಿಸಿದ್ದಾರೆ. ಸ್ವಾಮೀಜಿಗಳು ಮುಂದಿನ ಪೀಳಿಗೆಗೆ ಸಂಸ್ಕಾರ, ಮಾರ್ಗದರ್ಶನ ನೀಡಲಿ. ಶ್ರೀಗಳ ಸೇವೆ ದೇಶದುದ್ದಕ್ಕೂ ವಿಸ್ತರಣೆಯಾಗಲಿ ಎಂದು ಹಾರೈಸಿದರು.

ಶ್ರೀಗಳು ಧಾರವಾಡ ಜಿಲ್ಲೆಯ ಸಂಘಟನೆ ಮಾಡಿ, ಅಂತರ್ಜಾತಿ ವಿವಾಹಕ್ಕೆ ಒತ್ತು ನೀಡಬೇಕು ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಸಿದ್ಧರಾಮ ದೇವರು 4-5 ವರ್ಷದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಸಮಾಜದಲ್ಲಿರುವ ಮಾನಸಿಕ ಅಸ್ಥಿರತೆ ಹೋಗಲಾಡಿಸುವುದರಲ್ಲಿ ಸ್ವಾಮೀಜಿಗಳು ತೊಡಗಬೇಕು. ಜೊತೆಗೆ ಭಯೋತ್ಪಾದನೆಯನ್ನು ಧರ್ಮ ಜಾಗೃತಿ ಮೂಲಕ ಹೊಡೆದೋಡಿಸುವ ನಿಟ್ಟಿನಲ್ಲಿ ಸ್ವಾಮೀಜಿಗಳು ಕಾರ್ಯ ನಿರತರಾಗಬೇಕು ಎಂದರು.

ಸಂಸದ ಪ್ರಲ್ಹಾದ ಜೋಶಿ ಮಾತನಾಡಿದರು. ಬಳಿಕ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಕೋಡಿಮಠದ ಶ್ರೀ ಜಗದ್ಗುರು ಶಿವಾನಂದ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಇದೇ ವೇಳೆ ವಿವಿಧ ಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು. ನೀಲಮ್ಮ ತಾಯಿ ಅಸುಂಡಿ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಸಿ. ಪಾಟೀಲ, ಜಿ.ಪಂ. ಸದಸ್ಯೆ ಚೈತ್ರಾ ಶಿರೂರ, ಎಂಎಲ್​ಸಿ ಪ್ರದೀಪ ಶೆಟ್ಟರ್, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಐಎಎಸ್ ಅಧಿಕಾರಿ ಸ್ನೇಹಲ್ ಆರ್. ಇತರರು ಉಪಸ್ಥಿತರಿದ್ದರು.