ಗೋಣಿಕೊಪ್ಪಲು: ಸಮಾಜಮುಖಿ ಕಾರ್ಯದಲ್ಲಿ ಸಂಘ-ಸಂಸ್ಥೆಗಳು ಸಕ್ರೀಯವಾಗಿ ಪಾಲ್ಗೊಳ್ಳಬೇಕು, ಇದರಿಂದ ನಾಗರಿಕರಿಗೆ ವಿವಿಧ ರೀತಿಯ ಪ್ರಯೋಜನ ಪಡೆಯಲು ಅನುಕೂಲವಾಗಲಿದೆ ಎಂದು ಪೊನ್ನಂಪೇಟೆ ತಾಲೂಕು ತಹಸೀಲ್ದಾರ್ ಮೋಹನ್‌ಕುಮಾರ್ ಸಲಹೆ ನೀಡಿದರು.
ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಅನುಭವಿ ವೈದ್ಯರ ಉಚಿತ ಸಲಹೆಯನ್ನು ಪಡೆಯಬಹುದಾಗಿದೆ. ಪ್ರತಿ ನಾಗರಿಕನು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.
ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜುದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಮ್ಮಕ್ಕಡ ಕೂಟವು ಹತ್ತಾರು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದೆ. ಈ ಬಾರಿ ನುರಿತ ತಜ್ಞ ವೈದ್ಯರ ತಂಡದಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಸುತ್ತಮುತ್ತಲಿನ ನಾಗರಿಕರು ಸೇರಿದಂತೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಪೌರಕಾರ್ಮಿಕರು ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಈ ಯೋಜನೆಯ ಫಲ ಪಡೆದಿದ್ದಾರೆ.
ಅಮ್ಮತ್ತಿಯ ಆರ್‌ಐಎಚ್‌ಪಿ ಆಸ್ಪತ್ರೆಯ ನುರಿತ ತಜ್ಞರ ತಂಡ ತಮ್ಮ ಅಮೂಲ್ಯ ಸಮಯವನ್ನು ಇಂತಹ ಸಮಾಜಮುಖಿ ಕಾರ್ಯಕ್ಕೆ ನೀಡಿರುವುದು ಶ್ಲಾಘನೀಯ. ಪೊಮ್ಮಕ್ಕಡ ಕೂಟವೂ ಸಾರ್ವಜನಿಕವಾಗಿ ಹಲವು ಕಾರ್ಯಕ್ರಮಗಳನ್ನು ಸಮಾಜಮುಖಿಯಾಗಿ ನೀಡುತ್ತಿರುವುದರಿಂದ ತಾಲೂಕು ಆಡಳಿತವು ಸಂಘದ ಕಟ್ಟಡಕ್ಕೆ ಉಚಿತ ನಿವೇಶನವನ್ನು ಮಂಜೂರು ಮಾಡಿಕೊಡುವಂತೆ ತಹಸೀಲ್ದಾರರಲ್ಲಿ ಮನವಿ ಮಾಡಿದರು.
ಕಾವೇರಿ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಮುಕ್ಕಾಟಿರ ಬೀನಾ ಪ್ರಸನ್ನ, ಅಮ್ಮತ್ತಿಯ ಆರ್‌ಐಎಚ್‌ಪಿ ಆಸ್ಪತ್ರೆಯ ನುರಿತ ತಜ್ಞ ವೈದ್ಯರಾದ ಡಾ.ಸಿ.ಕೆ.ಎನ್.ಚಂದ್ರು, ಡಾ.ನಿಶ್ಚಲಾ, ಡಾ.ಕೃಷ್ಣಪ್ರಸಾದ್, ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.
