ಮೈಸೂರು:ಸಮಾಜಮುಖಿ ಕಾರ್ಯಗಳಿಗೆ ಜನಸ್ಪಂದನೆ ಸಿಗಬೇಕು. ಆಗ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಸ್ಪೂರ್ತಿ ದೊರೆಯುತ್ತದೆ ಎಂದು ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ ಅಭಿಪ್ರಾಯಪಟ್ಟರು.
ಚೈತ್ರ ಫೌಂಡೇಷನ್‌ನಿಂದ ನಗರದ ಗಾನಭಾರತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ದಶಮಾನೋತ್ಸವ ಹಾಗೂ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
ಜೀವನದಲ್ಲಿ ಬಗೆಹರಿಸಲಾಗದ ಸಮಸ್ಯೆ ಯಾವುದೂ ಇಲ್ಲ. ತಮ್ಮ ದೃಷ್ಟಿಕೋನ ಮತ್ತು ವಿವೇಚನೆಯಿಂದ ಬದುಕಿನ ಕಷ್ಟಕರ ಪರಿಸ್ಥಿತಿಯಲ್ಲಿಯೂ ವ್ಯಕ್ತಿಗಳು ಬದುಕು ಕಟ್ಟಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಸಾಧಿಸುವ ಛಲ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಹೇಳಿದರು.
ಚೈತ್ರ ಫೌಂಡೇಷನ್ ಶಿಕ್ಷಣ ಮತ್ತು ಸಮಾಜಮುಖಿ ಕ್ಷೇತ್ರಗಳಲ್ಲಿ ದುಡಿದವರನ್ನು ಗುರುತಿಸಿ ಗೌರವಿಸುತ್ತಿರುವುದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಭ್ರಮರ ಟ್ರಸ್ಟ್‌ನ ಮಾಧುರಿ ತಾತಾಚಾರಿ ಮಾತನಾಡಿ, ವರ್ತಮಾನದ ಸಮಾಜದಲ್ಲಿ ಸ್ವಾರ್ಥಪರತೆ ಹೆಚ್ಚಾಗಿ ಕಂಡುಬರುತ್ತಿದ್ದು, ಹಣ, ಅಗ್ಗದ ಯಶಸ್ಸಿನ ಹಿಂದೆ ಓಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸಮಾಜಕ್ಕೆ ಸ್ಪಂದಿಸುವ ಮನೋಭಾವ ಕಡಿಮೆಯಾಗುತ್ತಿದೆ ಎನಿಸುತ್ತಿದೆ. ನಾವು ನ್ಯಾಯವಾಗಿ ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಮೀಸಲಿಟ್ಟರೆ ಆತ್ಮತೃಪ್ತಿ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ವೈ.ಎನ್. ಮಹಾಲಕ್ಷ್ಮೀ, ಹರವು ದೇವೇಗೌಡ, ಹರ್ಷಿಯಾಬಾನು, ಆನಂದ್ ಮಲ್ಲಿಗೆ ಗೌಡ, ಎನ್.ಎಂ. ಪುಷ್ಪಪ್ರಿಯ, ಎಂ.ಎ. ಶಿವಪ್ರಕಾಶ್, ಸರಸ್ವತಿ ಹಲಸಗಿ, ಎಂ. ರಾಧಿಕಾ, ಎಂ. ಸಂಗಪ್ಪ, ಸುಬ್ಬಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.
ಫೌಂಡೇಶನ್ ಅಧ್ಯಕ್ಷೆ ಸುಬ್ಬಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ಬಳಗದ ಅಧ್ಯಕ್ಷೆ ಕಾವೇರಿಯಮ್ಮ, ಪದಾಧಿಕಾರಿಗಳಾದ ಅಶ್ವತ್ಥನಾರಾಯಣ, ಡಾ. ಸುಧಾ, ಕೆ. ರಮೇಶ್ ಇತರರು ಇದ್ದರು.