ಸಮಸ್ಯೆ ಸ್ಪಂದಿಸಿ ಅಭಿವೃದ್ಧಿಗೆ ಶ್ರಮಿಸುವೆ

ನೆಲಮಂಗಲ: ಅತ್ಯಧಿಕ ಮತ ನೀಡಿ ಗೆಲುವು ತಂದುಕೊಟ್ಟಿರುವ ಕ್ಷೇತ್ರದ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿಗೆ ಶ್ರಮಿಸುವೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ವ್ಯಾಪ್ತಿಯ ಮಾದನಾಯಕನಹಳ್ಳಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಯಲಹಂಕ ಭಾಜಪದಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರ ನಿರೀಕ್ಷೆಯಂತೆ ಸಮರ್ಥ ನಾಯಕತ್ವದಲ್ಲಿ ಸರ್ಕಾರ ರಚನೆಯಾಗಿದೆ. ರಾಜ್ಯದ ಮೈತ್ರಿ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪದಂತೆ ತಂತ್ರ ಮಾಡಿದರೂ ಪ್ರಯೋಜನವಾಗಲಿಲ್ಲ. ಮೈತ್ರಿ ಪಕ್ಷಗಳ ಕುತಂತ್ರದಿಂದಲೇ ದೊಡ್ಡದೊಡ್ಡ ತಲೆಗಳು ಮನೆ ಸೇರಿವೆ ಎಂದು ಲೇವಡಿ ಮಾಡಿದರು.

ಯಲಹಂಕ ಕ್ಷೇತ್ರದ ಶಾಸಕ ಎಚ್.ಆರ್.ವಿಶ್ವನಾಥ್ ಮಾತನಾಡಿ, ಸಮ್ಮಿಶ್ರ ಸರ್ಕಾರದ ದುರಾಡಳಿತ ಒಂದೆಡೆಯಾದರೆ ಪಂಚಾಯಿತಿ ಅಧಿಕಾರಿಯಿಂದ ಸರ್ಕಾರದ ಮುಖ್ಯ ಅಧಿಕಾರಿಗಳ ತನಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯಲಹಂಕ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಸೌಲಭ್ಯ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸಲ್ಲ. ಕ್ಷೇತ್ರದ ಜನರು ಬಿಜೆಪಿಗೆ ಬಹುಮತ ನೀಡಿದ್ದು, ದಾಸನಪುರ ಹೋಬಳಿಯಲ್ಲಿ ಬಲವಿಲ್ಲದ ಬಿಜೆಪಿಗೆ ಅಧಿಕಾರ ನೀಡುವಂತೆ ಮಾಡಿರುವ ಜನರಿಗೆ ಧನ್ಯವಾದಗಳು ಎಂದರು.

ಸಂಸದ ಬಿ.ಎನ್.ಬಚ್ಚೇಗೌಡ ಅವರಿಗೆ ಸಮನ್ವಯ ಸಮಿತಿ ಸದಸ್ಯ ಗಣೇಶಪ್ಪ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಜಿಪಂ ಸದಸ್ಯ ಡಾ.ಉದ್ದಂಡಯ್ಯ, ಸುಧಾ ರವಿಕುಮಾರ್, ಜಯಶ್ರೀ ಅಶೋಕ್ ಸೇರಿ ಶಾಸಕ ವಿಶ್ವನಾಥ್ ಅವರಿಗೆ ಬೆಳ್ಳಿ ಕತ್ತಿನೀಡಿ ಸನ್ಮಾನಿಸಿದರು. ಡಾ.ಶಾಮ ಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಬಿಜೆಪಿ ಬೆಂಗಳೂರು ನಗರ ಜಿಲ್ಲೆ ಉಪಾಧ್ಯಕ್ಷ ಗೋವಿಂದಪ್ಪ, ಮುಖಂಡ ಹೊಂಬಯ್ಯ, ರವಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *