ಸಮಸ್ಯೆ, ಪರಿಹಾರ ಎರಡೂ ಬೇಕು

|ದೀಪಾ ರವಿಶಂಕರ್

ಕನ್ನಡ, ತಮಿಳು, ತೆಲುಗು, ಗುಜರಾತಿ, ಬೆಂಗಾಲಿ ಇಂಥಾ ಯಾವುದೇ ಪ್ರಾಂತೀಯ ಭಾಷೆಯ ಮಾಧ್ಯಮಗಳಿಗೆ ದೊರಕುವುದರ ಕನಿಷ್ಟ ಹತ್ತು ಪಟ್ಟು ಹೆಚ್ಚು ವೀಕ್ಷಕರು ಹಿಂದಿ ಮನರಂಜನಾ ಮಾಧ್ಯಮಗಳಿಗೆ ದೊರಕುತ್ತಾರೆ. (ಈ ಮಾತು ತೆರೆಯ ಮನರಂಜನಾ ಮಾಧ್ಯಮಗಳಾದ ಸಿನಿಮಾ, ಕಿರುತೆರೆ ಮತ್ತು ಇತ್ತೀಚೆಗೆ ಖ್ಯಾತಿಗೆ ಬರುತ್ತಿರುವ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗುವ ಕಿರುಚಿತ್ರಗಳಿಗೆ ಅನ್ವಯಿಸುತ್ತದೆ. ವೇದಿಕೆಯ ಪ್ರದರ್ಶನಗಳಿಗಲ್ಲ) ಬೇರೆ ಯಾವುದೇ ಭಾಷೆಯ ಸಿನಿಮಾ ಧಾರಾವಾಹಿಗಳನ್ನು ಆಯಾ ಭಾಷಿಗರು ಮಾತ್ರ ನೋಡುತ್ತಾರೆ. ಆದರೆ ಹಿಂದಿ ಕಾರ್ಯಕ್ರಮಗಳಿಗೆ ಹಿಂದಿ ಭಾಷಿಕರಂತೂ ಸಿಕ್ಕೇ ಸಿಕ್ಕುತ್ತಾರೆ. ಜತೆಗೆ ದೇಶಾದ್ಯಂತ ಹಿಂದಿ ಮಾತಾಡದ ಎಷ್ಟೋ ಜನರೂ ವೀಕ್ಷಕರಾಗಿ ದೊರಕುತ್ತಾರೆ. ಆದ್ದರಿಂದಲೇ ಹಿಂದಿ ಧಾರಾವಾಹಿಗಳಿಗೆ ತಮ್ಮ ಕಥೆಗಳನ್ನು ಸಾಕಷ್ಟು ಪ್ರಸ್ತುತವಾಗಿ ಇಟ್ಟುಕೊಳ್ಳಬೇಕಾದ ಒತ್ತಡ ಬೇರೆ ಧಾರಾವಾಹಿಗಳಿಗಿಂತ ಹೆಚ್ಚಿರುತ್ತದೆ. ಅದರರ್ಥ ಅಲ್ಲಿ ಬಹಳ ರ್ತಾಕವಾದ ಪ್ರಸ್ತುತ ಸಮಾಜವನ್ನು ಬಿಂಬಿಸುವ ಧಾರಾವಾಹಿಗಳಿರುತ್ತವೆ ಎಂದಲ್ಲ. ನಮ್ಮ ಧಾರಾವಾಹಿಗಳಷ್ಟೇ ಜಾಳು ಕಥೆಗಳು, ಅತ್ಯುತ್ಪ್ರೇಕ್ಷಿತ ಶ್ರೀಮಂತಿಕೆ, ಸಮಾಜದ ಕಟು ವಾಸ್ತವಗಳ ಕಡೆಗಿನ ಅಸಡ್ಡೆ ಅವುಗಳನ್ನು ತಿದ್ದುವ ನಿಟ್ಟಿನಲ್ಲಿ ಯಾವ ಆಸಕ್ತಿಯನ್ನೂ ತೋರದ ಬೇಜವಾಬ್ದಾರಿತನ ಎಲ್ಲವೂ ಅಲ್ಲಿಯೂ ಹೇರಳವಾಗಿದೆ. ಆದರೆ ಹೊಸತನಕ್ಕೆ ತನ್ನನ್ನು ತಾನು ತೆರೆದುಕೊಳ್ಳುವ, ಆ ಮೂಲಕ ವೀಕ್ಷಕರನ್ನು ನಿರಂತರವಾಗಿ ಹಿಡಿದಿಟ್ಟುಕೊಳ್ಳುವ ತಂತ್ರಗಳೂ ಅವರಲ್ಲಿವೆ. ತಮ್ಮ ಹಳೆಯ ಕಥೆಗಳನ್ನು ತಮ್ಮದೇ ಪ್ರಾಂತೀಯ ಭಾಷೆಗಳ ವಾಹಿನಿಗಳ ಮೇಲೆ ಹೇರುವ ಈ ಮೂಲ ವಾಹಿನಿಗಳಿಂದ ನಮ್ಮವರು ನೋಡಿ ಬದಲಿಸಿಕೊಳ್ಳಬಹುದಾದ ಹಲವು ಅಂಶಗಳಿವೆ. ಅದರಲ್ಲಿ ಮುಖ್ಯವಾದ ಅಂಶವನ್ನು ಮಾತ್ರ ಸದ್ಯಕ್ಕೆ ಇಲ್ಲಿ ರ್ಚಚಿಸುತ್ತೇನೆ.

ಹಿಂದಿ ಧಾರಾವಾಹಿಗಳಲ್ಲಿ ಅಂದರೆ ಅವುಗಳ ಕಥೆ ಸಾಗುವ ಓಘದಲ್ಲಿ ಒಂದು ಪ್ಯಾಟರ್ನ್ ಇದೆ. ನಮ್ಮ ಧಾರಾವಾಹಿಗಳಿಗೆ ಬೇರೆಯೇ ಪ್ಯಾಟರ್ನ್ ಇದೆ. ವಿವರಿಸುತ್ತೇನೆ.

ಹಿಂದಿ ಧಾರಾವಾಹಿಗಳು ಸಮಸ್ಯೆ – ಪರಿಹಾರ, ಸಮಸ್ಯೆ – ಪರಿಹಾರ ವಿಧಾನದಲ್ಲಿ ಸಾಗುತ್ತವೆ. ಅಂದರೆ ಕಥೆಯಲ್ಲಿ ಒಂದು ಸಮಸ್ಯೆ ಬರುತ್ತದೆ. ಅದನ್ನು ಪಾತ್ರಗಳು ಎದುರಿಸುತ್ತಾರೆ. ಅದರಿಂದ ಆಗುವ ಬೇರೆ ಬೇರೆ ಕಷ್ಟಗಳನ್ನು ನಿವಾರಿಸಿಕೊಳ್ಳುತ್ತಾರೆ. ಕಷ್ಟ, ಸಮಸ್ಯೆ ಪರಿಹಾರವಾಗುತ್ತದೆ. ಇಷ್ಟಾಗಲು ಹತ್ತೋ ಇಪ್ಪತ್ತೋ ಎಪಿಸೋಡುಗಳು ಬೇಕಾಗುತ್ತದೆ. ಸಮಸ್ಯೆ ಪರಿಹಾರವಾದ ನಂತರ ಆ ನಿರಾಳವಾದ ಮನಃಸ್ಥಿತಿಯಲ್ಲಿ ಮನೆಯವರೆಲ್ಲರ ಹಗುರಾದ ಮಾತುಕಥೆಗಳಿಂದ, ಚಿಕ್ಕ ಪುಟ್ಟ ತರಲೆಗಳಿಂದ, ದಂಪತಿಗಳ ಅಥವಾ ಪ್ರೇಮಿಗಳ ಮಧುರ ಕ್ಷಣಗಳಿಂದ ಇನ್ನೊಂದು ವಾರದ ಎಪಿಸೋಡುಗಳು ತುಂಬಲ್ಪಡುತ್ತವೆ. ನಂತರ ಕಥೆ ಮತ್ತೊಂದು ಸಮಸ್ಯೆಯನ್ನು ಎದುರಿಸುತ್ತದೆ, ಎಲ್ಲ ಪಾತ್ರಗಳೂ ಸಮಸ್ಯೆ ಸೃಷ್ಟಿಸುವಲ್ಲಿ ಅಥವಾ ಎದುರಿಸುವಲ್ಲಿ ನಿರತವಾಗುತ್ತವೆ.

ಈ ವಿಧಾನದಲ್ಲಿ ಬಹಳಷ್ಟು ಧನಾತ್ಮಕ ಅಂಶಗಳಿವೆ. ಮೊದಲನೆಯದು ಕಥೆ ಎಷ್ಟು ವರ್ಷಗಳು ಸಾಗಿದರೂ ವೀಕ್ಷಕರಿಗೆ ಮುಂದಿನ ಕಂತನ್ನು ನೋಡುವ ಉತ್ಸಾಹ ಇರುತ್ತದೆ. ಯಾವುದೋ ಗುಟ್ಟು ಬಹುಕಾಲ ವೀಕ್ಷಕರನ್ನು ಸತಾಯಿಸದೇ ಹೊರಬಂದುಬಿಡುತ್ತದೆ. ಆಗ ಮುಂದೇನು? ಎಂಬ ಕುತೂಹಲ ವೀಕ್ಷಕರನ್ನು ತೆರೆಯ ಮುಂದೆ ಹಿಡಿದು ಕೂರಿಸುತ್ತದೆ. ಇದು ಧಾರಾವಾಹಿಯ ರೇಟಿಂಗ್ ದೃಷ್ಟಿಯಿಂದ ಒಳ್ಳೆಯದು.

ಪ್ರತಿ ಬಾರಿ ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸುವಾಗ ಸದ್ಯ ಸಮಾಜದಲ್ಲಿ ನಡೆಯುತ್ತಿರುವುದನ್ನು ಕಥೆಯ ಭಾಗವಾಗಿ ತರಬಹುದು. ರಾಜ್ಯ, ದೇಶ ಎದುರಿಸುವ ಸಮಸ್ಯೆಗಳನ್ನು ಸಮಾಜದ ಮುಂದೆ ತಂದು ತನ್ನ ವೀಕ್ಷಕರಲ್ಲಿ ಅರಿವು ಮೂಡಿಸಬಹುದು. ತನ್ನ ಸಾಮಾಜಿಕ ಜವಾಬ್ದಾರಿಯನ್ನು ಆ ಮೂಲಕ ನಿಭಾಯಿಸಬಹುದು. ಆ ಮೂಲಕ ತಾನು ಹೆಚ್ಚು ಹೆಚ್ಚು ಪ್ರಸ್ತುತವಾಗಬಹುದು.

ಬೇರೆ ಬೇರೆ ವ್ಯಕ್ತಿತ್ವದ, ಬೇರೆ ಬೇರೆ ಸಂಸ್ಕೃತಿಯ ಜನರನ್ನು ಪಾತ್ರಗಳಾಗಿ ತಂದು ಇನ್ನೂ ಹೆಚ್ಚು ಜನಕ್ಕೆ ಧಾರಾವಾಹಿ ಆಪ್ತವಾಗಬಹುದು. ಉದಾಹರಣೆಗೆ, ಉತ್ತರ ಭಾರತದಲ್ಲಿ ಎರಡು ಮೂರು ದಿನ ವಿದ್ಯುತ್ ಇಲ್ಲದೆ ಪರದಾಡಿದ ಘಟನೆಯನ್ನು ಕಥೆಯಾಗಿ ಒಂದು ಧಾರಾವಾಹಿ ತೋರಿಸಿತು. ಅದರ ಪಾತ್ರಗಳು ಆ ಸನ್ನಿವೇಶವನ್ನು ಹೇಗೆ ಪಾಸಿಟಿವ್ ಆಗಿ ನಿಭಾಯಿಸಿದವು ಎಂದು ತೋರಿಸಿದವು. ಇಲ್ಲಿನ ವ್ಯವಸ್ಥೆಯನ್ನು ಕಂಡು ರೋಸಿಹೋದ ನಾಯಕ ಈ ದೇಶವೇ ಅವ್ಯವಸ್ಥೆ ಎಂದು ದೇಶ ತೊರೆಯುವ ಮಾತಾಡಿದಾಗ ನಾಯಕಿ ನಮ್ಮ ಸಂಸ್ಕೃತಿಯ ಬಗ್ಗೆ ಮಾತಾಡಿ ನಾಯಕನನ್ನು ಒಲಿಸುವುದು ಇವೇ ಮುಂತಾದವು. ಕಥೆಯ ಎಲ್ಲ ಪಾತ್ರಗಳೂ ನಿರಂತರವಾಗಿ ಆತಂಕದಲ್ಲಿರುವುದು, ನೋಡುವವರಲ್ಲೂ ಒತ್ತಡವನ್ನುಂಟುಮಾಡುತ್ತವೆ. ಈ ವಿಧಾನದಲ್ಲಿ ಹಾಗಲ್ಲದೆ ಸಮಸ್ಯೆ ಪರಿಹಾರವಾಗಿ ತಿಳಿ ವಾತಾವರಣದ ಎಪಿಸೋಡುಗಳು ವೀಕ್ಷಕರಲ್ಲೂ ಶಾಂತತೆಯನ್ನು, ಆಹ್ಲಾದವನ್ನೂ ತುಂಬುತ್ತವೆ.

ನಮ್ಮ ಧಾರಾವಾಹಿಗಳಲ್ಲಿ ಹಾಗಲ್ಲ. ಇಲ್ಲಿ ಒಂದು ಮೂಲ ಸಮಸ್ಯೆ ಇರುತ್ತದೆ. ಧಾರಾವಾಹಿ ಗಿರಕಿ ಹೊಡೆಯುವುದೇ ಆ ಸಮಸ್ಯೆಯ ಸುತ್ತ. ಧಾರಾವಾಹಿ ಮೂರು, ನಾಲ್ಕು, ಐದು ವರ್ಷಗಳು ಓಡಿದರೂ ಆ ಮೂಲ ಸಮಸ್ಯೆ ಪರಿಹಾರವಾಗುವುದೇ ಇಲ್ಲ. ಆ ಸಮಸ್ಯೆಗೇ ಮತ್ತಷ್ಟು ಉಪಸಮಸ್ಯೆಗಳು ಹುಟ್ಟಿಕೊಳ್ಳುತ್ತಾ, ರಹಸ್ಯಗಳು, ಗುಟ್ಟುಗಳು ಬೆಳೆದುಕೊಳ್ಳುತ್ತಾ ಕಥೆ ಇನ್ನಷ್ಟು ಮತ್ತಷ್ಟು ಸಂಕೀರ್ಣವಾಗುತ್ತಾ, ಗೋಜಲಾಗುತ್ತಾ ಸಾಗುತ್ತದೆ.

ಈ ವಿಧಾನದಲ್ಲಿ ಜನರ ಕುತೂಹಲವನ್ನು ಕಾಯ್ದು ಕೊಳ್ಳುವುದು ಕಷ್ಟ. ಕಥೆಗಾರರಿಗೆ, ಸಂಭಾಷಣೆಕಾರರಿಗೆ ವೈವಿಧ್ಯವನ್ನು ಸೃಷ್ಟಿಸುವುದು ಸಮಸ್ಯೆ. ನಟ-ನಟಿಯರಿಗೆ ವರ್ಷಾನುಗಟ್ಟಲೆ ಒಂದೇ ಥರದ ನಟನೆ ಮಾಡಿ ಮಾಡಿ ಅವರ ನಟನೆಯಲ್ಲಿ ಏಕತಾನ ಮೂಡುವ ಭಯ. ಸಮರ್ಥ ನಿರ್ದೇಶಕರಿಗೆ ಇಲ್ಲಿ ತಾನು ಮಾಡಬಹುದಾದ, ತೋರಬಹುದಾದ ಕ್ರಿಯಾತ್ಮಕತೆ ಏನೂ ಇಲ್ಲ ಎಂಬ ಭಾವನೆ ಕಾಡತೊಡಗುತ್ತದೆ. ಯಾವ ಕ್ರಿಯಾತ್ಮಕತೆಯೂ ಇಲ್ಲದ, ನಿರ್ದೇಶನದ ಘನತೆಯ ಅಂದಾಜೂ ಇಲ್ಲದ ಅಪ್ರಬುದ್ಧರೂ ನಿರ್ದೇಶಕರಾಗಿ ಮಾರ್ಪಡುವ ಭಯವೂ ಉದ್ಯಮವನ್ನು ಆವರಿಸುತ್ತದೆ. ನಮ್ಮ ಧಾರಾವಾಹಿಗಳು ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಸಾಗುತ್ತವೆಯೇ ಹೊರತು ಉತ್ತರಗಳನ್ನಲ್ಲ. ಈ ತಂತ್ರ ವೀಕ್ಷಕರನ್ನು ನೋಡುವ ಗೀಳಿಗೆ ಬೀಳಿಸಬಹುದೇ ಹೊರತು ಮನರಂಜಿಸಲು ಸಾಧ್ಯವಿಲ್ಲ. ನಟ-ನಟಿಯರು, ನಿರ್ದೇಶಕರುಗಳಿಗೆ ಹೊರಗೆ ಕೇಳಿಬರುವ ಮಾತುಗಳಿಂದ, ಸಾಮಾಜಿಕ ಮಾಧ್ಯಮಗಳಾದ ಫೇಸ್​ಬುಕ್, ಇನ್ಸಾ್ಟಗ್ರಾಮ್ಳಲ್ಲಿ ವ್ಯಕ್ತವಾಗುವ ಜನಸಾಮಾನ್ಯರ ಅಭಿಪ್ರಾಯಗಳಿಂದ ಇದು ನಿಚ್ಚಳವಾಗಿದೆ.

ಶಾ. ಬಾಲುರಾವ್ ಅವರು ತಮ್ಮ ಸೂರ್ಯ ಇವನೊಬ್ಬನೇ ಪುಸ್ತಕದಲ್ಲಿ ಒಂದು ಪುಟ್ಟ ಕವನ ಬರೆದಿದ್ದಾರೆ. ದಿನವೂ ಹುಟ್ಟಿ ದಿನವೂ ಸಾಯುವುದು ಇವನ ವಿಚಿತ್ರ ಅಮರತ್ವ ಎಂದು. ಪ್ರಸ್ತುತ ನಮ್ಮ ಧಾರಾವಾಹಿಗಳಿಗೂ ಅಂಥ ಅಮರತ್ವದ ಅಗತ್ಯವಿದೆ.

ಪ್ರತಿಕ್ರಿಯಿಸಿ: [email protected]gmail.com, [email protected])

Leave a Reply

Your email address will not be published. Required fields are marked *