ಕಕ್ಕೇರಿ: ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಬೇಕೆಂದರೆ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ನೀಡಬೇಕು. ಐದು ವರ್ಷ ಸಂಪೂರ್ಣ ಸರ್ಕಾರ ನಡೆಸಲು ಅವಕಾಶ ಕಲ್ಪಿಸಿದರೆ ರಾಜ್ಯದ ಚಿತ್ರಣವೇ ಬದಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಪಂಚರತ್ನ ರಥಯಾತ್ರೆ ನಿಮಿತ್ತ ಗುರುವಾರ ರಾತ್ರಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಅವರು, ಶುಕ್ರವಾರ ಬಿಷ್ಠಾದೇವಿ ಮಂದಿರದ ಎದುರು ಏರ್ಪಡಿಸಿದ್ದ ಸಭೆ ಉದ್ದೇಶಿಸಿ ಮಾತನಾಡಿ, ಖಾನಾಪುರ ಹಿಂದುಳಿದ ತಾಲೂಕಾಗಿದ್ದು, ರಸ್ತೆಗಳನ್ನು ನೋಡಿದರೆ ಯಾವುದೇ ಅಭಿವೃದ್ಧಿ ಆಗದೆ ಇರುವುದು ಗೊತ್ತಾಗುತ್ತದೆ. ತಾಲೂಕು ಸಂಪೂರ್ಣ ಅಭಿವೃದ್ಧಿ ಮಾಡುವುದಕ್ಕೋಸ್ಕರ ಮುಂಬರುವ ಚುನಾವಣೆಯಲ್ಲಿ ಖಾನಾಪುರ ತಾಲೂಕಿನ ಜೆಡಿಎಸ್ ಅಭ್ಯರ್ಥಿ ನಾಸೀರ್ ಬಾಗವಾನ ಅವರನ್ನು ಗೆಲ್ಲಿಸಬೇಕು. ಅವರಿಂದ ನನಗೆ ಹಾಗೂ ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗುತ್ತದೆ ಎಂದರು. ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಅದಕ್ಕೆ ನಿಮ್ಮ ಸಹಕಾರ ಅಗತ್ಯ. ಬಿಷ್ಠಾದೇವಿ ಹಾಗೂ ಶಿವಶರಣ ಡೋಹರ್ ಕಕ್ಕಯ್ಯ ಅವರ ಸ್ಥಳದಲ್ಲಿ ನಾನು ವಾಸ್ತವ್ಯ ಮಾಡಿದ್ದೇನೆ. ಜನರಿಂದ ಹಲವು ಮನವಿ ಸ್ವೀಕರಿಸಿದ್ದು, ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ, ಮುಂಬರುವ ದಿನಗಳಲ್ಲಿ ಸಮಸ್ಯೆ ಪರಿಹರಿಸಿಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಜೆಡಿಎಸ್ ಅಭ್ಯರ್ಥಿ ನಾಸೀರ್ ಬಾಗವಾನ ಮಾತನಾಡಿ,

ನುಡಿದಂತೆ ನುಡಿಯುವ ಏಕೈಕ ಪಕ್ಷವೆಂದರೆ ಅದು ಜೆಡಿಎಸ್. ನನ್ನ ಸ್ವಂತ ಹಣದಿಂದ ತಾಲೂಕಿನ ಕೆಲ ರಸ್ತೆ, ಸೇತುವೆಗಳು, ಸಾವಿರಾರು ಮಂದಿರ ನಿರ್ಮಾಣಕ್ಕೆ ಸಹಾಯ ಮಾಡಿದ್ದೇನೆ. ಈ ಬಾರಿಯಾದರೂ ನನ್ನನ್ನು ಗೆಲ್ಲಿಸಿ. 20 ಸಾವಿರಕ್ಕೂ ಹೆಚ್ಚು ಜನರು ಯಾತ್ರೆಯಲ್ಲಿ ಪಾಲ್ಗೊಂಡಿರುವುದನ್ನು ನೋಡಿದರೆ ನನ್ನನ್ನು ಗೆದ್ದೇ ಗೆಲ್ಲಿಸುತ್ತೀರಿ ಎಂದು ನಂಬಿದ್ದೇನೆ ಎಂದರು. ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಯಲ್ಲಪ್ಪ ಗುಪ್ಪಿತ ಮಾತನಾಡಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ, ತಾಲೂಕು ಅಧ್ಯಕ್ಷ ಎಂ.ಎಂ.ಸಾಹುಕಾರ, ಉಪಾಧ್ಯಕ್ಷ ಇಲಿಯಾಸ್ ಪಟೇಲ, ಮುಖಂಡರಾದ ಲಾಯಕಲಿ ಬಿಚ್ಚುನವರ, ವೀರಯ್ಯ ಹಿರೇಮಠ, ಅರ್ಜುನ ಮಂಜಲ್ಕರ, ಯಲ್ಲಪ್ಪ ಚನ್ನಾಪುರ, ಶಿವಾಜಿ ಅಂಬಡಗಟ್ಟಿ, ನಿಂಗೂಜಿ ಸಂಬರ್ಗಿ, ರಾಜು ಗುಂಜಿಕರ, ನಾರಾಯಣ ಪಾಟೀಲ, ರಮಾನಂದ ಅಂಬಡಗಟ್ಟಿ, ಪ್ರದೀಪ ಮಿಠಾರಿ. ವಿನಾಯಕ ಕಲಾಲ ಇತರರು ಇದ್ದರು.
ಚನ್ನಬಸವೇಶ್ವರ ಮಂದಿರಕ್ಕೆ ಎಚ್‌ಡಿಕೆ ಭೇಟಿ: ಸಮೀಪದ ಲಿಂಗನಮಠ ಗ್ರಾಮದ ಶ್ರೀ ಚನ್ನಬಸವೇಶ್ವರ ಮಂದಿರಕ್ಕೆ ಶುಕ್ರವಾರ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಶೀರ್ವಾದ ಪಡೆದರು. ಮುಂಬರುವ ದಿನಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ತಾಲೂಕಿನ ಜೆಡಿಎಸ್ ಅಭ್ಯರ್ಥಿ ಕೊಡಗೈ ದಾನಿ ನಾಸೀರ್ ಬಾಗವಾನ್ ಅವರಿಗೆ ಮತ ನೀಡಿ ಶಾಸಕನನ್ನಾಗಿ ಮಾಡಿ. ರಾಜ್ಯದಲ್ಲಿ ನಮ್ಮ ಪಕ್ಷ ಹೆಚ್ಚಿನ ಸ್ಥಾನ ಪಡೆದು ಐದು ವರ್ಷ ಅಧಿಕಾರ ಮಾಡಲು ಆಶೀರ್ವದಿಸಿ ಎಂದರು. ಲಿಂಗನಮಠ ಗ್ರಾಮಸ್ಥರು ಶ್ರೀ ಚನ್ನಬಸವೇಶ್ವರ ದೇವಸ್ಥಾನ ಅಭಿವೃದ್ಧಿಗೋಸ್ಕರ ಮನವಿ ಸಲ್ಲಿಸಿದರು.