ಸಮಸ್ಯೆ ನಿರ್ಲಕ್ಷಿಸಿದ್ದಕ್ಕೆ ಮತದಾನ ಬಹಿಷ್ಕಾರ

ಕಳಸ: ಮತದಾನ ದಿನ ಹತ್ತಿರ ಬರುತ್ತಿದ್ದಂತೆ ತಾಲೂಕಿನ ಹಲವೆಡೆ ಮತದಾನ ಬಹಿಷ್ಕಾರದ ಕಾವು ಏರುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೊರೆ ಹೋಗಿ ಸುಸ್ತಾದ ಗ್ರಾಮಸ್ಥರು ಈಗ ಚುನಾವಣಾ ಬಹಿಷ್ಕಾರದಂತಹ ನಿರ್ಧಾರದಿಂದ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ.

ಹೋಬಳಿಯ ಇಡಕಿಣಿ ಗ್ರಾಪಂ ವ್ಯಾಪ್ತಿಯ ನಾಗರಕುಡಿಗೆಯ 20 ಕುಟುಂಬಗಳು ಮತದಾನ ಬಹಿಷ್ಕಾರದ ನಿರ್ಧಾರ ಮಾಡಿದ್ದಾರೆ. ನಾಗರಕುಡಿಗೆ ಗ್ರಾಮಕ್ಕೆ ಹೋಗಲು ರಸ್ತೆಯೇ ಇಲ್ಲ. ಯಾವುದೇ ವಾಹನಗಳೂ ಹೋಗುವುದಿಲ್ಲ. ಹಲವಾರು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡಿದ್ದೆವು. ಆ ಸಂದರ್ಭದಲ್ಲಿ ಅಧಿಕಾರಿಗಳು ಆರು ತಿಂಗಳ ಒಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಅಂದು ಬಂದು ಹೋದ ಅಧಿಕಾರಿಗಳು ಮತ್ತೆ ಈ ಕಡೆ ಬಂದಿಲ್ಲ ಎನ್ನುತ್ತಾರೆ ಗ್ರಾಮದ ವಸಂತ.

ಇಡಕಿಣಿ ಗ್ರಾಪಂ ವ್ಯಾಪ್ತಿಯ ಹೆಮ್ಮಕ್ಕಿ-ಕೋಟೆಮಕ್ಕಿ-ಗಬ್ಗಲ್ ಸಂರ್ಪಸುವ ರಸ್ತೆ ದುರಸ್ತಿ ಆಗದೆ 15 ವರ್ಷಗಳೆ ಕಳೆದಿದೆ. ನಕ್ಸಲ್ ಪೀಡಿತ ಪ್ರದೇಶವಾದರೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ರಸ್ತೆ ಅಭಿವೃದ್ಧಿ ಆಗುವವರೆಗೂ ಮತದಾನ ಮಾಡುವುದಿಲ್ಲ ಎಂದು ಹೆಮ್ಮಕ್ಕಿ ಗ್ರಾಮದ ಆತ್ಮಾನಂದ ಅವರು ಸಾಮಾಜಿಕ ಜಾಲತಾಣದ ಮುಖಾಂತರ ಅಭಿಯಾನ ಪ್ರಾರಂಭಿಸಿದ್ದಾರೆ.

ಸಂಸೆ ಗ್ರಾಪಂ ವ್ಯಾಪ್ತಿಯ ಗುಳ್ಯ ಗ್ರಾಮಸ್ಥರು ಸೇತುವೆಗಾಗಿ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಕುದುರೆಮುಖ ವಿನೋಬನಗರದ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಕುದುರೆಮುಖದಲ್ಲಿ ಅತಂತ್ರ ಜೀವನ ನಡೆಸುತ್ತಿರುವ ನಿರಾಶ್ರಿತರಿಗೆ ನೆರವು ನೀಡಬೇಕೆಂದು ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಸುಭಾಶ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ.

ಕಳಸ ಹೋಬಳಿಯಲ್ಲಿ ಬಹುತೇಕ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ರಸ್ತೆ, ನೀರು, ವಿದ್ಯುತ್, ಮೊಬೈಲ್ ನೆಟ್​ವರ್ಕ್, ಹಕ್ಕು ಪತ್ರ, ರೇಷನ್ ಕಾರ್ಡ್, ಮನೆ ಮುಂತಾದ ಮೂಲ ಸಮಸ್ಯೆಗಳು ಇದ್ದು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆಂದು ಬರುವ ಅನುದಾನಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಗ್ರಾಮಸ್ಥರೊಂದಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಗ್ರಾಮಸ್ಥರು ಈ ವ್ಯವಸ್ಥೆಯಡಿ ಮತದಾನದ ಮೇಲಿನ ನಂಬಿಕೆ ಕಳೆದುಕೊಂಡಿರುವುದು ಈ ಭಾಗದಲ್ಲಿ ಚುನಾವಣಾ ಬಹಿಷ್ಕಾರವೇ ಸ್ಪಷ್ಟಪಡಿಸುತ್ತದೆ.

ಅಕ್ರಮ ಮದ್ಯಮಾರಾಟಕ್ಕೆ ಆಗ್ರಹ: ಕಳಸ ಗ್ರಾಪಂ ವ್ಯಾಪ್ತಿಯ ಕುಕ್ಕೋಡು ಮತ್ತು ಕಲ್ಲಾಟ ಗುಡ್ಡದ ಬಹುತೇಕ ದಿನಸಿ ಅಂಗಡಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ನಮ್ಮ ಜನರೆಲ್ಲ ಮದ್ಯವ್ಯಸನಿಗಳಾಗುತ್ತಿದ್ದು ಸುಸೂತ್ರವಾಗಿ ಮತದಾನ ಮಾಡುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ನಾವು ಮತದಾನ ಮಾಡುವುದಿಲ್ಲ ಅಥವಾ ನೋಟಾದ ಮೂಲಕ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.