ಅಥಣಿ ಗ್ರಾಮೀಣ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಮಾಜಿ ಶಾಸಕ ಶಹಜಾನ್ ಡೊಂಗರಗಾಂವ ನೇತೃತ್ವದಲ್ಲಿ ರಾಜ್ಯ ದ್ರಾಕ್ಷಿ ಬೆಳೆಗಾರರ ನಿಯೋಗವು ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚೌವ್ಹಾಣ ಸೇರಿ ಹಲವು ಸಚಿವರನ್ನು ಭೇಟಿ ಮಾಡಿ ದ್ರಾಕ್ಷಿ ಬೆಳೆಯ ಸಮಸ್ಯೆಗೆ ಕೈಗೊಳ್ಳಬೇಕಾದ ಪರಿಹಾರ ಕುರಿತು ಬುಧವಾರ ದೆಹಲಿಯಲ್ಲಿ ಮನವಿ ಸಲ್ಲಿಸಿದರು.
ದ್ರಾಕ್ಷಿ ಬೆಳೆಗೆ ಬೆಂಬಲ ಬೆಲೆ, ಸಂಸ್ಕಾರಣಾ ಅವಧಿಯಲ್ಲಿ ಆಗುವ ಹಾನಿ, ಮಾರುಕಟ್ಟೆ ಸೌಲಭ್ಯ, ವಿಶೇಷ ವಿಮಾ ಸೌಲಭ್ಯ ಕುರಿತು ಚರ್ಚಿಸಿದರು. ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ದ್ರಾಕ್ಷಿ ಬೆಳೆಗಾರರ ಸಮಸ್ಯೆಗೆ ವಿಶೇಷವಾದ ಯೋಜನೆ ರೂಪಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಜಸಿಂಗ್ ಭರವಸೆ ನೀಡಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಹಾನಿಗೊಳಗಾದ ದ್ರಾಕ್ಷಿ ಬೆಳೆಗಾರರ ಸಾಲ ಮತ್ತು ಬಡ್ಡಿ ಮನ್ನಾ, ಸಂಸ್ಕರಣಾ ಅವಧಿಯಲ್ಲಾದ ಹಾನಿಗೆ ಎನ್‌ಡಿಆರ್‌ಫ್ ನಲ್ಲಿ ಪರಿಹಾರ ಒದಗಿಸಬೇಕೆಂದು ವಿನಂತಿಸಿದರು. ಸಂಬಂಧಪಟ್ಟ ಇಲಾಖೆಯಿಂದ ವರದಿ ತರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಸಂಸದರಾದ ಜಗದೀಶ ಶೆಟ್ಟರ್, ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ, ದ್ರಾಕ್ಷಿ ಬೆಳೆಗಾರರ
ಸಂಕಷ್ಟ ಮತ್ತು ಸಮಸ್ಯೆ ಕುರಿತು ಲೋಕ ಸಭೆಯಲ್ಲಿ ಧ್ವನಿ ಎತ್ತುವಂತೆ ಮನವಿ ಮಾಡಿದರು. ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ಶ್ರೀಕಾಂತ ಮಾಕಾಣಿ, ಪ್ರಕಾಶ ಪಾಟೀಲ, ಸುಭಾಷ ಮೋರೆ, ಅಪ್ಪಾಸಾಹೇಬ ತೇರದಾಳ ಇತರರಿದ್ದರು.