ಹುಕ್ಕೇರಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾರಾದರೂ ಕೋವಿಡ್ ಸೋಂಕಿತರಿದ್ದರೆ ಕ್ಯಾರಗುಡ್ಡದಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದರು.
ಕ್ಯಾರಗುಡ್ಡದ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಿದ ಕೋವಿಡ್ ಕೇರ್ ಸೆಂಟರ್‌ಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಶಾಲೆಯಲ್ಲಿ 30 ಹಾಸಿಗೆಯ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿಗೆ ಬೇಕಾದಲ್ಲಿ ಅಣಿಗೊಳಿಸಲು ತಾಲೂಕಾಡಳಿತ ಸಿದ್ಧವಿದೆ. ಈ ಕೇಂದ್ರದಲ್ಲಿ ರೋಗಿಗಳಿಗೆ ಗುಣಮಟ್ಟದ ಆಹಾರ ನೀಡುವ ಜತೆಗೆ ವೇಳೆಗೆ ಸರಿಯಾಗಿ ಔಷಧೋಪಚಾರ ನೀಡಲು ಕ್ರಮ ಕೈಗೊಂಡಿದ್ದಾರೆ. ಸ್ವತಃ ಆಹಾರ ಸೇವಿಸಿ ಪರಿಶೀಲಿಸಿದ್ದೇನೆ. ಅಧಿಕಾರಿಗಳನ್ನು ಅಭಿನಂದಿಸಿ ಅದನ್ನೇ ಮುಂದುವರಿಸಿಕೊಂಡು ಹೋಗುವಂತೆ ತಿಳಿಸಿದ್ದೇನೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರಿದ್ದರೆ ತಕ್ಷಣ ಅವರನ್ನು ಇಲ್ಲಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕಾಡಳಿತಕ್ಕೆ ಸೂಚಿಸಿದರು.
ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು, ಸೋಂಕಿತರಿಗೆ ಬೇಕಾದ ಔಷಧ ಇದೆಯೇ? ಆಕ್ಸಿಜನ್ ಕೊರತೆ ಉಂಟಾದಲ್ಲಿ ವಿಶ್ವರಾಜ ಶುಗರ್ಸ್ ಮತ್ತು ಸಂಕೇಶ್ವರದ ಹೀರಾ ಶುಗರ್ಸ್‌ನಿಂದ ಪಡೆದುಕೊಳ್ಳಬೇಕು. ಸಮಸ್ಯೆ ಉಂಟಾದಲ್ಲಿ ತಕ್ಷಣ ತಮ್ಮ ಗಮನಕ್ಕೆ ತರುವಂತೆ ನಿರ್ದೇಶಿಸಿದರು. ನಂತರ ಸರ್ಕಾರಿ ಆಸ್ಪತ್ರೆಗೆ ಮತ್ತು ಪುರಸಭೆಗೆ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಸದಸ್ಯ ರಾಜು ಮುನ್ನೋಳಿ, ಧುರೀಣರಾದ ಪರಗೌಡ ಪಾಟೀಲ, ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ, ತಾಪಂ ಇಒ ಬಿ.ಕೆ.ಲಾಳಿ, ಸಮಾಜ ಕಲ್ಯಾಣ ಇಲಾಖೆಯ ಉಮೇಶ ಸಿದ್ನಾಳ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಶೈಲ ಹಿರೇಮಠ, ಸಿಪಿಐ ರಮೇಶ ಛಾಯಾಗೋಳ, ಟಿಎಚ್‌ಒ ಉದಯ ಕುಡಚಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಪಿಎಸ್‌ಐ ಸಿದ್ರಾಮಪ್ಪ ಉನ್ನದ ಮತ್ತಿತರರು ಇದ್ದರು.