ಸಮಸ್ತ ವಿಶ್ವದ ಚಿತ್ತ ಭಾರತದತ್ತ

ಗೋಕರ್ಣ: ಭಾರತ ಅಸಹಾಯಕ ಸ್ಥಿತಿಯಿಂದ ವಿಶ್ವದತ್ತ ನೋಡುವ ಕಾಲವೊಂದಿತ್ತು. ಆದರೆ, ಮೋದಿಯವರ ಆಡಳಿತ ಸಮಸ್ತ ವಿಶ್ವ ಭಾರತದತ್ತ ನೋಡುವಂತೆ ಮಾಡಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಹಿರೇಗುತ್ತಿಯಲ್ಲಿ ಟೀಮ್ ಮೋದಿ ವತಿಯಿಂದ ಭಾನುವಾರ ಜರುಗಿದ ಬಹಿರಂಗ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆ ಭಾರತ ಹೇಳಿದ್ದನ್ನು ಜಗತ್ತು ಇಂದು ಅನುಸರಿಸುವಂತೆ ಮಾಡಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ಇದಕ್ಕೆ ವಿಶ್ವಕ್ಕೆ ವಿಶ್ವವೇ ಯೋಗ ಪದ್ಧತಿಯನ್ನು ಅನುಕರಣೆ ಮಾಡಲು ಮುಂದಾಗಿರುವುದು ಜ್ವಲಂತ ಸಾಕ್ಷಿಯಾಗಿದೆ. ಭಾರತದ ಬಗ್ಗೆ ವಿಶ್ವದ ದೃಷ್ಟಿ ಈಗ ಬದಲಾಗಿದೆ ಎಂದರು.

ಅದೇ ಗುಡಿಸಲು: ಇಂದಿರಾ ಗಾಂಧಿ ಅವರ ‘ಗರೀಬಿ ಹಟಾವೋ ಘೊಷಣೆ’ ಕೊನೆವರೆಗೆ ಘೊಷಣೆಯಾಗಿಯೇ ಉಳಿಯಿತು. ಬಡವರು ಬಡವರಾಗಿಯೇ ಉಳಿಯುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ಇಂದಿರಾ ಗಾಂಧಿಯವರು ತಮ್ಮ ಪ್ರತಿ ಚುನಾವಣೆಯ ಆರಂಭವನ್ನು ಗುಡಿಸಲೊಂದರ ಮುಂದೆ ನಿಂತು ಭಾರಿ ಪ್ರಚಾರ ಪಡೆದು ಆರಂಭಿಸುತ್ತಿದ್ದರು. ರಾಜೀವಗಾಂಧಿ ಕೂಡ ಅದನ್ನೇ ಮಾಡಿದರು. ರಾಹುಲ್ ಕೂಡ ಪ್ರಚಾರಕ್ಕೆ ಗುಡಿಸಲನ್ನು ಅನುಸರಿಸುವುದನ್ನು ಚುನಾವಣೆಯಲ್ಲಿ ಬಿಡಲಿಲ್ಲ. ಆದರೆ, ಮೊನ್ನೆ ಪ್ರಿಯಾಂಕಾ ಮತ್ತದೇ ಗುಡಿಸಲನ್ನು ಹುಡುಕಿದರು. ಒಂದೂ ಗುಡಿಸಲು ಸಿಗದೇ ವಾಪಸ್ಸಾದರು. ಮೋದಿಯವರ ಆಡಳಿತ ಬಡತನಕ್ಕೆ ಕಾಯಕಲ್ಪ ನೀಡದ್ದು ಇದಕ್ಕೆ ಕಾರಣ. ಇಂದು ದೇಶ ಜಗತ್ತಿನ 6ನೇ ಅಭಿವೃದ್ಧಿಶೀಲ ಆಗಿರುವುದಕ್ಕೆ ಐದು ವರ್ಷದ ಆಡಳಿತ ಕಾರಣ ಎಂದು ಸೂಲಿಬೆಲೆ ಚಕ್ರವರ್ತಿ ಹೇಳಿದರು.

ಹಿರೇಗುತ್ತಿಯ ಯೋಧ ಸಂಜೀವ ನಾಯಕ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಹಿರಿಯ ಧುರೀಣ ನಾಗರಾಜ ನಾಯಕ ವೇದಿಕೆಯಲ್ಲಿದ್ದರು. ಸುರೇಂದ್ರ ನಾಯಕ, ವೆಂಕಟರಾಯ ನಾಯಕ, ರಾಮು ಕೆಂಚನ್ ನಿರ್ವಹಿಸಿದರು.