ಕೋಲಾರ: ಜಿಲ್ಲೆಯಲ್ಲಿ ಅನಿಯಮಿತ ಲೀಡ್ ಶೆಡ್ಡಿಂಗ್‌ನಿಂದ ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುತ್ತಿದ್ದು, ಸರ್ಕಾರ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಬೆಸ್ಕಾಂ ಸೂಪರಿಟೆಂಡೆಂಟ್ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರಾಜ್ಯ ಸರ್ಕಾರ, ಬೆಸ್ಕಾಂ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಸರಿಯಾಗಿ ವಿದ್ಯುತ್ ಪೂರೈಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಆಧಾರಿಸಿ ಶೇ.೮೦ ರಷ್ಟು ಜನ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ಸರ್ಕಾರ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದು, ಇದರಿಂದ ಸಾವಿರಾರು ರೂ.ಬಂಡವಾಳ ಹಾಕಿ ಮಾಡಿದ ಬೆಳೆಗಳು ಒಣಗಿಹೋಗಿವೆ. ರೈತರು ಹಗಲಿರುಳೆನ್ನದೆ ತೋಟಗಳಿಗೆ ನೀರು ಹಾಯಿಸಿದರೂ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಷ್ಟಕ್ಕೆ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ಸರ್ಕಾರಗಳು ವ್ಯವಸಾಯಕ್ಕೆ ಅತ್ಯಗತ್ಯವಾಗಿರುವ ಶಾಶ್ವತ ನೀರಾವರಿ ಯೋಜನೆಗಳನ್ನು ಕಲ್ಪಿಸಿಲ್ಲ. ನದಿ ನಾಲೆಗಳಿಲ್ಲದ ಜಿಲ್ಲೆಯಲ್ಲಿ ರೈತರು ಪೂರ್ಣ ಪ್ರಮಾಣದಲ್ಲಿ ಅಂತರ್ಜಲದ ಮೇಲೆ ಅವಲಂಬನೆಯಾಗಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದು ಸರಿಯಲ್ಲ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಈ ಬಾರಿ ಸಮರ್ಪಕವಾಗಿ ಮಳೆಯಾಗದೆ ಕಂಗಾಲಾಗಿರುವ ರೈತರನ್ನು ಮತ್ತಷ್ಟು ಸಂಕಷ್ಟದ ಸ್ಥಿತಿಗೆ ದೂಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಮನೆಗಳಿಗೆ ನೀಡುತ್ತಿರುವ ನಿರಂತರ ಜ್ಯೋತಿನ ವಿದ್ಯುತ್‌ನಲ್ಲೂ ಗಂಟೆಗಟ್ಟಲೆ ಕಡಿತ ಮಾಡುವ ಮೂಲಕ ಕಿರು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆ ನೀಡಲಾಗುತ್ತಿದೆ. ಅತಿ ಸಣ್ಣ ಹಾಗೂ ಗುಡಿ ಕೈಗಾರಿಕೆಗಳು ವಿದ್ಯುತ್ ವ್ಯತ್ಯಯದಿಂದ ಉತ್ಪಾದನೆ ಕಡಿತ ಹಾಗೂ ವಿದ್ಯುತ್ ಬೆಲೆ ಏರಿಕೆಯಿಂದ ನಷ್ಟ ಅನುಭವಿಸುತ್ತಿದ್ದು ಮುಚ್ಚುವ ಸ್ಥಿತಿಗೆ ಬಂದಿವೆ. ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಬೃಹತ್ ಕೈಗಾರಿಕೆಗಳು ವಿದ್ಯುತ್ ಬೆಲೆ ಏರಿಕೆಯಿಂದ ನೆರೆ ರಾಜ್ಯಗಳೊಂದಿಗೆ ಉತ್ಪಾದನೆಯಲ್ಲಿ ಪೈಪೋಟಿ ನಡೆಸಲಾಗದೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದರಿಂದ ಇಲ್ಲಿನ ಕಾರ್ಮಿಕರು ಮತ್ತು ನೌಕರರು ಸಂಕಷ್ಟದಲ್ಲಿ ಬದುಕುವಂತಾಗಿ ರಾಜ್ಯ ಆರ್ಥಿಕ ದಿವಾಳಿಯತ್ತ ಸಾಗುವ ಸಾಧ್ಯತೆಯಿದೆ ಎಂದು ದೂರಿದರು.
ಎಂಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ, ವಿದ್ಯುತ್ ದರವನ್ನು ದುಪ್ಪಟ್ಟು ಮಾಡಿರುವ ಕಾಂಗ್ರೆಸ್ ಸರ್ಕಾರ ದರ ಹೆಚ್ಚಿಸುವ ಮೂಲಕ ಗ್ರಾಹಕರ ಕಿಸೆಯಿಂದಲೇ ಹಣ ಕಸಿದುಕೊಂಡು ಗ್ಯಾರಂಟಿ ಜಾರಿ ಮಡಿದಂತೆ ನಾಟಕವಾಡುತ್ತಿದೆ. ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದು, ರೈತನ ನೆಮ್ಮದಿಗೆ ಗ್ಯಾರಂಟಿ ನೀಡದ ಹೊರತು ಉಳಿದದ್ದೆಲ್ಲಾ ನಿಷ್ಪಯೋಜಕ ಎಂಬುದನ್ನು ತಿಳಿಸಬೇಕಿದೆ. ಬರದಿಂದ ತತ್ತರಿಸಿರುವ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸದೆ ಬೀದಿಗೆ ತಂದು ನಿಲ್ಲಿಸಿದೆ ಎಂದು ಆರೋಪಿಸಿದರು.
ಬೆಸ್ಕಾಂ ಸೂಪರಿಟೆಂಡೆಂಟ್ ಇಂಜಿನಿಯರ್ ಮೃತ್ಯುಂಜಯ ಅವರಿಗೆ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಣಕನಹಳ್ಳಿ ನಟರಾಜ್, ಮುಖಂಡರಾದ ವಕ್ಕಲೇರಿ ರಾಮು, ಬಾಬು ಮೌನಿ, ದಿಂಬ ನಾಗರಾಜ್, ರಮೇಶ್‌ಗೌಡ ಇತರರು ಇದ್ದರು.
ಸಮರ್ಪಕ ವಿದ್ಯುತ್ ಪೂರೂಕೆಗೆ ಪಟ್ಟು
ಕೋಲಾರದಲ್ಲಿ ಜೆಡಿಎಸ್ ಮುಖಂಡರು ವಿದ್ಯುತ್ ಲೋಡ್ ಶೆಡ್ಡಿಂಗ್ ವಿರುದ್ಧ ಪ್ರತಿಭಟಿಸಿದರು. ಎಂಎಲ್ಸಿ ಇಂಚರ ಗೋವಿಂದರಾಜು, ಮುಖಂಡ ಸಿಎಂಆರ್ ಶ್ರೀನಾಥ್, ವಕ್ಕಲೇರಿ ರಾಮು ಇತರರು ಇದ್ದರು.