More

    ಸಮರ್ಥ ಗುರುವಿನ ನಿರೀಕ್ಷೆಯಲ್ಲಿ ಸಂಗೀತಾ

    ಗದಗ: ಜಿಲ್ಲೆಯ ಪ್ರತಿಭೆ ಅಂಧ ಬಾಲಕಿ ಸಂಗೀತಾ ಭರಮಗೌಡ್ರ ಅವರು ಸಂಗೀತ ಕಲೆ ಮೂಲಕ ನಾಡಿನ ಜನರನ್ನು ರಂಜಿಸಿರುವುದು ತಿಳಿದಿರುವ ಸಂಗತಿ. ಖಾಸಗಿ ವಾಹನಿಯ ರಿಯಾಲಿಟಿ ಶೋದಲ್ಲಿ ಸೆಮಿಫೈನಲ್​ವರೆಗೂ ತಲುಪಿ ತನ್ನ ಕಲಾ ಪ್ರತಿಭೆ ಪ್ರದರ್ಶನ ಮಾಡಿದ ಕಲಾವಿದೆ ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶನದ ಜತೆಗೆ ಸಮರ್ಥ ಗುರುವಿನ ನಿರೀಕ್ಷೆಯಲ್ಲಿದ್ದಾಳೆ.

    13 ವರ್ಷದ ಸಂಗೀತಾ ಸಾಧನೆ ಮಾಡಬೇಕೆಂಬ ಕನಸನ್ನು ಕಟ್ಟಿಕೊಂಡು, ಅನೇಕ ನೋವುಗಳನ್ನು ಅನುಭವಿಸಿ ಗುರುವಿಲ್ಲದೇ ಒಂದು ಹಂತ ತಲುಪಿದ್ದಾಳೆ. ಯಾವುದೇ ಸಂಗೀತದ ಹಿನ್ನೆಲೆ ಇರದಿರುವ ಕುಟುಂಬದಿಂದ ಬಂದ ಪ್ರತಿಭೆಗೆ ಗುರುವಿನ ನೆರಳು ಬೇಕಾಗಿದೆ. ಉತ್ತಮ ಗುರುಗಳು ಸಿಕ್ಕರೆ ಅವರಿಂದ ಮತ್ತಷ್ಟು ತರಬೇತಿ ಪಡೆದು ಇನ್ನಷ್ಟು ಸಾಧನೆ ಮಾಡುವ ಹಂಬಲ ಅವಳದ್ದು.

    ಮೂಲತಃ ಗದಗ ತಾಲೂಕಿನ ನಾಗಾವಿ ಗ್ರಾಮದ ಸಂಗೀತಾ ಭರಮಗೌಡರ ಅವರು ಹುಟ್ಟು ಅಂಧರಾಗಿದ್ದು, ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದಾರೆ. ಸಂಗೀತಾ ಅವರಿಗೆ ಇನ್ನಿಬ್ಬರು ಸಹೋದರಿಯರಿದ್ದು, ಅವರು ಕೂಡ ದೃಷ್ಟಿಹೀನರಾಗಿದ್ದಾರೆ. ಹಿರಿಯರು ಮಾಡಿಟ್ಟಿರುವ ಕೃಷಿ ಜಮೀನಿನಲ್ಲಿಯೇ ಇವರ ತಾಯಿ ದುಡಿದು ಇವರನ್ನು ಸಾಕಿ ಸಲುಹುತ್ತಿದ್ದಾರೆ. ಬಡತನದ ಬೇಗುದಿಯಲ್ಲಿ ಬೆಳೆದ ಸಂಗೀತಾಳಿಗೆ ಆಸರೆ ನೀಡಿದ್ದು ಅವರ ಚಿಕ್ಕಪ್ಪ ಗೋವಿಂದಗೌಡ ಭರಮಗೌಡರ ಹಾಗೂ ಅವರ ಸೋದರತ್ತೆ ತುಳಸಿ ಪಾಟೀಲ. ಎಲ್ಲ ರೀತಿಯ ನೆರವು ನೀಡಿ ಅವರು ಬೆನ್ನಿಗೆ ನಿಂತಿದ್ದಾರೆ. ಅವಳ ಕಲಾ ಪ್ರತಿಭೆ ಗುರುತಿಸಿ ತಮ್ಮ ಕೈಲಾದ ಮಟ್ಟಿಗೆ ಸಂಗೀತ ಅಭ್ಯಾಸ ಮಾಡಿಸಿ ಒಂದು ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಆದರೆ, ಸಂಗೀತಾ ಅವರಿಗೆ ಆಧುನಿಕ ಸಂಗೀತ ಪರಿಕರಗಳ ಲಭ್ಯತೆ ಇಲ್ಲ. ಜತೆಗೆ ಸಮರ್ಥ ಗುರುಗಳೂ ಇಲ್ಲ. ‘ನನಗೆ ಸಂಗೀತ ವಿದ್ಯೆಯನ್ನು ಕೊಡಿ’ ಎಂದು ಸಂಗೀತಾ ಮುಗ್ಧತೆಯಿಂದ ಕೇಳುತ್ತಾಳೆ.

    ಸಂಗೀತಾ ಅವರ ಪ್ರತಿಭೆ ಗುರುತಿಸಿದ ನಗರದ ನಿವೃತ್ತ ಪ್ರಾಚಾರ್ಯ ಯಶೋಧಾ ಹಿರೇಗೌಡರ ಅವರು ತಮ್ಮ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಡೆಸಿಕೊಡುವ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಆಯೋಜಿಸಿ ಸಂಗೀತಾಳನ್ನು ಗೌರವಿಸುವ ಮೂಲಕ ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲೆಯ ಸಂಗೀತಾಸಕ್ತರಿಗೆ ಪರಿಚಯಿಸಿದರು. ಅಲ್ಲದೆ, ತಾವು ಜೀವಂತ ಇರುವವರೆಗೆ ಸಂಗೀತಾಳ ಎಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸುವುದರ ಜತೆಗೆ ಅವಳನ್ನು ದತ್ತು ಪಡೆಯುವುದಾಗಿ ಭರವಸೆ ನೀಡಿದ್ದಾರೆ. ಆರಂಭದಲ್ಲಿಯೇ ಸಂಗೀತಕ್ಕೆ ಬೇಕಾಗುವ ಬಹು ಉಪಯೋಗಿ ಸಂಗೀತ ಪರಿಕರಗಳನ್ನು ಕೊಡಿಸುವ ಮೂಲಕ ಅವಳ ಸಾಧನೆಗೆ ಯಶೋಧಾ ಹಿರೇಗೌಡರ ನೀರೆರಿದ್ದಾರೆ.

    ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ತಮ್ಮ ಅವ್ವ ಸೇವಾ ಟ್ರಸ್ಟ್ ಮೂಲಕ ಈಗಾಗಲೇ ಪ್ರತಿಭಾವಂತರಿಗೆ, ಅಸಹಾಯಕರಿಗೆ ನೆರವು ನೀಡಿದ್ದಾರೆ. ಸಂಗೀತಾಳಿಗೂ ಅವ್ವ ಸೇವಾ ಟ್ರಸ್ಟ್ ಬೆನ್ನೆಲುಬಾಗಿ ನಿಲ್ಲಲು ಮುಂದೆ ಬಂದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿರುವ ದೃಷ್ಟಿ ವಿಶೇಷ ಚೇತನ ಮಕ್ಕಳಿಗಾಗಿ ಇರುವ ಶಾಲೆಯಲ್ಲಿ ಸಂಗೀತಾಳಿಗೆ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಮಾಡುವುದಾಗಿ ಬಸವರಾಜ ಹೊರಟ್ಟಿ ಭರವಸೆ ನೀಡಿದ್ದಾರೆ.

    ಬಡತನದಲ್ಲಿ ಸಂಗೀತ ಅಭ್ಯಾಸ ಮಾಡಿರುವ ಅಂಧ ಕಲಾವಿದೆ ಸಂಗೀತಾ ಭರಮಗೌಡರ ಅವರಿಗೆ ಸಂಗೀತ ಹೇಳಿಕೊಡುವಂತಹ ಗುರುಗಳ ನೆರವು ಬೇಕಿದೆ. ಈಗಾಗಲೇ ಅನೇಕರು ಅವರ ಸಂಗೀತ ಅಭ್ಯಾಸಕ್ಕೆ ಬೇಕಿರುವ ಖರ್ಚು ಭರಿಸಲು ಮುಂದಾಗಿದ್ದಾರೆ. ಇನ್ನಷ್ಟು ನೆರವು ಸಿಕ್ಕರೆ ಕಲಾವಿದೆ ಸಂಗೀತಾ ಜಿಲ್ಲೆಗೆ ಕೀರ್ತಿ ತರುವಂತಹ ಸಾಧನೆ ಮಾಡಬಹುದು.

    | ಡಾ. ಬಸವರಾಜ ಧಾರವಾಡ, ಗದಗ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts