ಸಮರಸವೇ ಜೀವನ

|ಡಾ.ಗಣಪತಿ ಆರ್. ಭಟ್

ಪ್ರಜಾಪತಿಯಾದ ಬ್ರಹ್ಮನ ಬಳಿ ಒಮ್ಮೆ ರಾಕ್ಷಸರು ಬಂದು, ‘ನೀವು ಹಿರಿಯರಾದರೂ ನಮಗೆ ಯಾವುದೂ ನ್ಯಾಯಯುತವಾಗಿ ಸಿಗುತ್ತಿಲ್ಲ, ಎಲ್ಲವೂ ದೇವತೆಗಳ ಪಾಲಾಗುತ್ತಿವೆ’ ಎಂದು ಆಪಾದಿಸಿದರು. ಬ್ರಹ್ಮನು ರಾಕ್ಷಸರಿಗೂ, ದೇವತೆಗಳಿಗೂ ಭೋಜನ ಸ್ಪರ್ಧೆ ಏರ್ಪಡಿಸಿದ. ನಿಯಮದ ಪ್ರಕಾರ ಹಿರಿಯರೆನಿಸಿದ ರಾಕ್ಷಸರೇ ಮೊದಲು ಸಾಲಾಗಿ ಊಟಕ್ಕೆ ಕುಳಿತರು. ಬಡಿಸಿದ ಭಕ್ಷ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಕೈಯನ್ನು ಬಾಗಿಸದೇ ಸೇವಿಸಬೇಕೆಂಬ ಷರತ್ತನ್ನು ಬ್ರಹ್ಮನು ವಿಧಿಸಿದ. ಇದರಿಂದ ಕಂಗಾಲಾದ ರಾಕ್ಷಸರು ತಮ್ಮ ಕೈಯನ್ನು ಬಾಗಿಸದೇ, ಊಟ ಮಾಡಲಾಗದೇ ಪರಸ್ಪರ ಮುಖ ನೋಡುತ್ತ ಕುಳಿತರು.

ದೇವತೆಗಳ ಸರದಿ ಬಂದಾಗ ಎರಡು ಸಾಲುಗಳಲ್ಲಿ ಊಟಕ್ಕೆ ಕುಳಿತರು. ಭಕ್ಷ್ಯಗಳನ್ನು ಬಡಿಸಿದ ನಂತರ ಪ್ರತಿಯೊಬ್ಬರೂ ತಮ್ಮ ಎಲೆಯಲ್ಲಿರುವ ಊಟವನ್ನು ತಮ್ಮ ಎದುರಿನವರಿಗೆ ಉಣಿಸಲಾರಂಭಿಸಿದರು. ಎದುರು ಕುಳಿತ ದೇವತೆಗಳೂ ಹಾಗೆಯೇ ಮಾಡಲಾಗಿ ಎಲ್ಲರೂ ಕೈಯನ್ನು ಬಾಗಿಸದೆ ತೃಪ್ತಿಯಾಗುವಷ್ಟು ಊಟ ಸವಿದರು. ಬ್ರಹ್ಮನು ರಾಕ್ಷಸರಿಗೆ ಹೇಳಿದ- ‘ಜಗತ್ತಿನ ವ್ಯಾಪಾರವೇ ಹೀಗೆ. ಒಬ್ಬರಿಗೊಬ್ಬರು ಹಂಚಿಕೊಂಡಾಗಲೇ ಈ ಜಗತ್ತಿನಲ್ಲಿ ಎಲ್ಲವನ್ನೂ ಎಲ್ಲರೂ ಪಡೆಯಲು ಸಾಧ್ಯ. ಇನ್ಮುಂದೆ ನಿಮ್ಮ ಬಳಿ ಇರುವುದನ್ನು ಇತರರೊಂದಿಗೆ ಹಂಚಿಕೊಳ್ಳಿ, ಆಗಲೇ ಇತರರೂ ನಿಮಗೆ ತಮ್ಮಲ್ಲಿರುವುದನ್ನು ನೀಡುತ್ತಾರೆ. ಸಹಜವಾಗಿ ಜೀವನದಲ್ಲಿ ಎಲ್ಲವೂ ಸಿಗುತ್ತ ಹೋಗುತ್ತದೆ’.

ನಮ್ಮಲ್ಲಿ ಇರುವುದನ್ನು ಇತರರಿಗೆ ನೀಡಿ ಇತರರಿಂದ ಪಡೆದು ನಮ್ಮ ಕೊರತೆ ನೀಗಿಸಿಕೊಳ್ಳುವುದರಲ್ಲಿ ಬದುಕಿನ ಧನ್ಯತೆಯಿದೆ. ಧನಿಕನೋರ್ವ ಉದ್ಯಮ ಕೌಶಲವಿಲ್ಲದೆ ತನ್ನ ವ್ಯವಹಾರದಲ್ಲಿ ಪದೇಪದೆ ನಷ್ಟ ಅನುಭವಿಸುತ್ತಿದ್ದ. ಅದೇ ಸಮಯಕ್ಕೆ ಅವನಿಗೆ ಓರ್ವ ವಿದ್ಯಾವಂತ ಯುವಕ ಪರಿಚಿತನಾದ. ಆ ಯುವಕನಾದರೋ ತನ್ನ ಕೌಶಲ ಬಳಸಿ ಹೊಸ ಉದ್ಯಮ ಶುರು ಮಾಡಬೇಕೆಂಬ ಕನಸು ಕಾಣುತ್ತಿದ್ದ. ಆದರೆ ಹಣವಿಲ್ಲ. ಆತನ ಕೌಶಲ ಧನಿಕನಿಗೆ ಲಾಭ ತಂದುಕೊಟ್ಟಿತು. ಧನಿಕನಿಂದಾಗಿ ಯುವಕನ ಕನಸೂ ಈಡೇರಿತು. ಉದ್ಯಮ ಸಾವಿರಾರು ಜನರಿಗೆ ಜೀವನ ನೀಡಿತು. ಪರಸ್ಪರ ಹೊಂದಾಣಿಕೆಯಲ್ಲಿ ಜೀವನದ ಸರಳತೆ ಅಡಗಿದೆ. ಸಮುದ್ರ ತನ್ನೊಳಗಿನ ಸತ್ವವನ್ನು ಹಬೆಯ ರೂಪದಲ್ಲಿ ಮೋಡಕ್ಕೆ ನೀಡುವುದು. ಮೋಡವಾದರೋ ಮಳೆ ರೂಪದಲ್ಲಿ ಸಸ್ಯಗಳಲ್ಲಿ ನವಚೈತನ್ಯ ತುಂಬುತ್ತದೆ. ಸಸ್ಯಗಳೂ ಇತರರಿಂದ ತಾವು ಪಡೆದುದನ್ನು ಸ್ವಯಂಆಹಾರ ರೂಪ ಧರಿಸಿ ಅವು ಇತರರಿಗೆ ದಕ್ಕುವ ಹಾಗೆ ಮಾಡುತ್ತವೆ. ‘ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ’ ಎಂಬುದಾಗಿ ಭಗವದ್​ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ ಹಾಗೆ ಪರಸ್ಪರ ಕೊಡು-ತೆಗೆದುಕೊಳ್ಳುವಿಕೆಯ ಕಾರ್ಯ ನಡೆದಾಗಲೇ ಪರಮ ಶ್ರೇಯಸ್ಸು ಪ್ರಾಪ್ತವಾಗುವುದು. ನಮ್ಮಲ್ಲಿ ಇರುವುದನ್ನು ಇತರರಿಗೆ ಹಂಚಿಕೊಂದಾಗಲೇ ಇತರರಿಂದ ನಮಗೆ ಪ್ರೀತ್ಯಾದರ, ಮನ್ನಣೆ ದೊರೆಯುವವು. ಇದನ್ನೇ ನಮ್ಮ ಸನಾತನ ಧರ್ಮ ‘ಯಜ್ಞ’ ಎಂದು ಕರೆದಿದೆ. ನಮ್ಮ ಬದುಕೇ ಯಜ್ಞಭೂಮಿ. ಮಾಡುವ ಪ್ರತಿಕಾರ್ಯವೂ ಯಜ್ಞ ಎನಿಸಿಕೊಳ್ಳಬೇಕು. ‘ರಸವೇ ಜನನ ವಿರಸ ಮರಣ ಸಮರಸವೇ ಜೀವನ’ ಎಂಬುದಾಗಿ ವರಕವಿ ಬೇಂದ್ರೆ ಹೇಳಿದ ಹಾಗೆ ಈ ಜಗತ್ತು ನಿರ್ವಿುತವಾಗಿರುವುದು ಸಾಮರಸ್ಯವೆಂಬ ತಳಹದಿ ಮೇಲೆ.

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *