ಐಗಳಿ: ಸ್ಥಳೀಯ ಹೆಸ್ಕಾಂ ಆಡಳಿತ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಾದರೂ ಸಿಬ್ಬಂದಿ ಹಾಗೂ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗದೆ ಇರುವುದರಿಂದ ಜನಸಾಮಾನ್ಯರು, ರೈತರಿಗೆ ಅತೀವ ತೊಂದರೆಯಾಗುತ್ತಿದೆ.
ಸಮಯಕ್ಕೆ ಸರಿಯಾಗಿ ಬಾರದ ಹಾಗೂ ಕರ್ತವ್ಯ ಲೋಪ ಎಸಗುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅಥಣಿ ಭಾಜಪ ಮಂಡಳ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿ, ದಿನಂಪ್ರತಿ ತಡವಾಗಿ ಕರ್ತವ್ಯಕ್ಕೆ ಹಾಜರಾಗುವ ರೂಢಿ ಬೆಳೆಸಿಕೊಳ್ಳುತ್ತಿರುವ ಸಿಬ್ಬಂದಿ ಹಾಗೂ ಮೇಲಧಿಕಾರಿಗಳು ದೂರವಾಣಿ ಕರೆ ಮಾಡಿ ಸಮಸ್ಯೆಗಳನ್ನು ಹೇಳಿದರೂ ಸ್ಪಂದಿಸುತ್ತಿಲ್ಲ. ನಿಷ್ಕಾಳಜಿ ವಹಿಸುತ್ತಿರುವ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಹೆಸ್ಕಾಂ ಎಇಇ ಪಿ.ಎಸ್. ಶಿವಣ್ಣವರ, ನನಗೆ ಅಥಣಿ ಮತ್ತು ಐಗಳಿ ಎರಡು ಕಡೆಗಳಲ್ಲಿ ಚಾರ್ಜ್ ಇರುವುದರಿಂದ ತಡವಾಗುತ್ತಿದೆ. ಇಂದು ಕಚೇರಿಯಲ್ಲಿ ಎಸ್.ಎ. ಬಾಲಗಾವಿ ಅವರನ್ನು ಬಿಟ್ಟು ಇನ್ನುಳಿದ ಸಿಬ್ಬಂದಿ ಇರಲಿಲ್ಲ ಎನ್ನುವ ಮಾಹಿತಿ ಇದ್ದು, ಸರಿಯಾದ ವೇಳೆಗೆ ಕರ್ತವ್ಯಕ್ಕೆ ಹಾಜರಾಗದವರಿಗೆ ನೋಟಿಸ್ ನೀಡಲಾಗುವುದು ಎಂದರು.
ತಾಪಂ ಮಾಜಿ ಸದಸ್ಯಗುರಪ್ಪ ಬಿರಾದಾರ, ಗ್ರಾಪಂ ಮಾಜಿ ಸದಸ್ಯ ದುಂಡಪ್ಪ ದೊಡ್ಡಮನಿ, ಪ್ರಭು ಬಿರಾದಾರ ಇದ್ದರು.