ಸಮನ್ವಯ ಸಂತ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು

| ಡಾ.ಶ್ರದ್ಧಾನಂದ ಸ್ವಾಮಿಗಳು, 

ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ತುಂಬ ಸಂಚರಿಸಿ ಉಪನಿಷತ್ತು, ಭಗವದ್ಗೀತೆ, ವಚನಶಾಸ್ತ್ರದ ಮೇಲೆ ಹಲವಾರು ದಶಕಗಳವರೆಗೆ ಅನುಭಾವಪೂರ್ಣ ಪ್ರವಚನ ನೀಡಿದವರು ವಿಜಯಪುರ ಜ್ಞಾನಯೋಗಾಶ್ರಮದ ದಿವ್ಯಚೇತನ ಬ್ರಹ್ಮಲೀನ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರು. ಪೂಜ್ಯರು ವೇದಾಂತ, ಸಿದ್ಧಾಂತಗಳನ್ನು ಆಳವಾಗಿ ಅಧ್ಯಯನ ಮಾಡಿದವರು.

ಲೋಕೋದ್ಧಾರಕ್ಕಾಗಿ 1903ರ ಅಕ್ಟೋಬರ್ ತಿಂಗಳಲ್ಲಿ ಅವತರಿಸಿದ ಅವರು ಮಹಾನ್ ತಪಸ್ವಿಗಳಾದ ಗದುಗಿನ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳವರಿಂದ ಅನುಗ್ರಹೀತರಾದರು. ಅವರ ಅನುಭಾವಪೂರ್ಣ ಪ್ರವಚನ, ತಪೋವಾಣಿಯಿಂದ ಲಕ್ಷ ಲಕ್ಷ ಜನರು ತಮ್ಮ ಜೀವನದಲ್ಲಿ ಪರಮಶಾಂತಿಯನ್ನು ಅನುಭವಿಸಿದರು. ನೂರಾರು ಜನ ತ್ಯಾಗಿಗಳು, ಯೋಗಿಗಳು, ಶ್ರೇಷ್ಠ ಸನ್ಯಾಸಿಗಳು ಮೈದಾಳಿದರು. ಅವರಲ್ಲಿ ನಡೆದಾಡುವ ದೇವರು, ವಿಶ್ವಸಂತರು, ನಿರಾಭಾರಿಗಳು ಎಂದು ಚಿರಪರಿಚಿತರಾಗಿರುವ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರು ಅಗ್ರಗಣ್ಯರು. ಪೂಜ್ಯರ ಪ್ರೇರಣೆಯಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಅನೇಕ ಮಠಗಳು, ಆಶ್ರಮಗಳು, ಶಿಕ್ಷಣ ಸಂಸ್ಥೆಗಳು ನಿರ್ವಣವಾಗಿವೆ.

ಪೂಜಾನಿಷ್ಠರೂ, ಜ್ಞಾನದಾಸೋಹಿಗಳೂ, ಜಪಪ್ರಿಯರೂ ಆಗಿದ್ದ ವೇದಾಂತಕೇಸರಿ, ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರು ನಿರಂತರ ಮೂರು ಹೊತ್ತು ಪ್ರವಚನ ಮಾಡುತ್ತಿದ್ದರು. ಶ್ರಾವಣ ಮೊದಲಾದ ಪರ್ವಕಾಲದಲ್ಲಿ ಸಾಮೂಹಿಕ ಕೋಟಿ ಜಪಯೋಗ ನಡೆಸುತ್ತಿದ್ದರು. ಅದರಿಂದ ಸಾರ್ವಜನಿಕರಲ್ಲಿ ಶಿವಭಕ್ತಿ, ಶಿವಜ್ಞಾನ, ಶಿವಕ್ರಿಯೆಗಳು ಸಹಜವಾಗಿ ಉದಯಿಸುತ್ತಿದ್ದವು. ಪೂಜ್ಯ ಮಹಾಸ್ವಾಮಿಗಳವರು ಜಾತಿ-ಮತ-ಪಂಥಗಳ ಗಡಿಯನ್ನು ಮೀರಿ ನಿಂತು ಉಪದೇಶ ಮಾಡಿದರು. ಅಂತೆಯೇ ಎಲ್ಲ ಧರ್ಮದವರು ಅವರ ಉಪದೇಶಾಮೃತವನ್ನು ಸವಿದು ಪುನೀತರಾದರು. ಪೂಜ್ಯರ ಪ್ರವಚನಗಳನ್ನು ಆಧರಿಸಿ ಹಲವಾರು ಗ್ರಂಥಗಳು ಪ್ರಕಟವಾಗಿವೆ. ಅವುಗಳಲ್ಲಿ ಭಗವದ್ಗೀತೆ, ಸಿದ್ಧಾಂತಶಿಖಾಮಣಿ, ಪಾತಂಜಲಯೋಗಸೂತ್ರ, ಈಶ, ಕೇನ, ಕಠ, ಶ್ವೇತಾಶ್ವತರ, ಮುಂಡಕ, ಮಾಂಡೂಕ್ಯ ಮೊದಲಾದ ಉಪನಿಷತ್ತುಗಳು ಪ್ರಮುಖವಾದವು.

ಪೂಜ್ಯ ಮಹಾಸ್ವಾಮಿಗಳವರ ಪವಿತ್ರ ಸ್ಮರಣಾರ್ಥ ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಅನೇಕ ಹಿರಿಯ, ಕಿರಿಯ ಸಂತಮಹಂತರ ಸಾನ್ನಿಧ್ಯದಲ್ಲಿ ಪ್ರವಚನ, ಜಪಯೋಗ, ಮಹಾಪೂಜೆ, ಮಹಾಪ್ರಸಾದ ಮೊದಲಾದ ಧಾರ್ವಿುಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಧಾರ್ವಿುಕ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರದ ಸಹಸ್ರಾರು ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಪೂಜ್ಯರ ದರ್ಶನ-ಆಶೀರ್ವಾದ ಪಡೆದು ಪುನೀತರಾಗುತ್ತಾರೆ. ಈ ವರ್ಷದ ಗುರುಪೂರ್ಣಿಮಾ ಕಾರ್ಯಕ್ರಮ ಇದೇ ಜುಲೈ 16ರಂದು ನಡೆಯಲಿದೆ. ಅಂದು ಬೆಳಗ್ಗೆ 4ರಿಂದ 6 ಗಂಟೆಯವರೆಗೆ ಜಪಯೋಗ, 6ರಿಂದ 8ರ ತನಕ ಪೂಜ್ಯರ ಧ್ವನಿಸುರುಳಿಯ ಪ್ರವಚನ, ಪ್ರಣವಮಂಟಪ ಪೂಜೆ, ನಂತರ ಮಹಾಪ್ರಸಾದ ವಿತರಣೆ ಜರುಗುತ್ತದೆ.

Leave a Reply

Your email address will not be published. Required fields are marked *