ಸಮಗ್ರ ಕೃಷಿ ಅಭಿಯಾನ ರಥಯಾತ್ರೆಗೆ ಚಾಲನೆ

ಶಿರಹಟ್ಟಿ: ಕೃಷಿ ಇಲಾಖೆಯ ವ್ಯಾಪ್ತಿಗೊಳಪಟ್ಟ ತೋಟಗಾರಿಕೆ, ಜಲಾನಯನ, ಎನ್​ಆರ್​ಇಜಿ

ಯೋಜನೆಗಳ ಸದ್ಬಳಕೆಗಾಗಿ ರೈತರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಹೋಬಳಿ ಮಟ್ಟದಲ್ಲಿ ಸಮಗ್ರ ಕೃಷಿ ಅಭಿಯಾನ ರಥಯಾತ್ರೆ ನಡೆಸಲಾಗುತ್ತದೆ ಎಂದು ಇಲಾಖೆ ಜಂಟಿ ನಿರ್ದೇಶಕ ಸಿ.ಬಿ. ಬಾಲರಡ್ಡಿ ಹೇಳಿದರು.

ಪಟ್ಟಣದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಶಿರಹಟ್ಟಿ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ರಥಯಾತ್ರೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸತತ 3 ದಿನಗಳವರೆಗೆ ಶಿರಹಟ್ಟಿ ಹೋಬಳಿ ಮಟ್ಟದ ಎಲ್ಲ ಗ್ರಾಮಗಳಲ್ಲಿ ರಥಯಾತ್ರೆ ಸಂಚರಿಸಲಿದೆ. ಕೃಷಿ ಇಲಾಖೆಗೆ ಸಂಬಂಧಿಸಿದ ರೈತ ಸುರಕ್ಷಾ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸೇರಿ ಭೂಮಿಯ ಫಲವತ್ತತೆ, ಬೀಜೋಪಚಾರ ಕ್ರಮ, ಬೆಳೆಗಳ ರೋಗ ಹತೋಟಿ, ಕೃಷಿ ಯಂತ್ರೋಪಕರಣ ಬಳಕೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಗುವುದು. ರೈತರು ಇದರ ಸದುಪಯೋಗ ಪಡೆದಾಗ ಮಾತ್ರ ಇಲಾಖೆ ಶ್ರಮ ಸಾರ್ಥಕವಾಗುತ್ತದೆ ಎಂದರು.

ತಾಪಂ ಇಒ ಆರ್.ವೈ. ಗುರಿಕಾರ ಮಾತನಾಡಿ, ಬಡ ಕಾರ್ವಿುಕರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಡೆಯಲು ಕೃಷಿ ಇಲಾಖೆಯಿಂದ ತಾಲೂಕಿನ ಬೆಳ್ಳಟ್ಟಿ, ಹುಲ್ಲೂರ, ಚಿಕ್ಕ ಸವಣೂರ, ಯಳವತ್ತಿ, ಸೂರಣಗಿ ಗ್ರಾಮಗಳ ಹೊಲಗಳ ಜಲಾನಯನ ಪ್ರದೇಶದಲ್ಲಿ ಮಣ್ಣು, ಅಂತರ್ಜಲ ರಕ್ಷಣೆಗೆ ಎನ್​ಆರ್​ಇಜಿ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿ ಬದುವು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಈ ಮೂಲಕ ನೂರಾರು ಕೃಷಿ ಕಾರ್ವಿುಕರಿಗೆ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಆಶಪ್ಪ ಪೂಜಾರ, ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಕೃಷಿ ಸಹಾಯಕ ಅಧಿಕಾರಿ ಸಿ.ಬಿ. ಬೇವೂರ, ಭಗವತಿ, ಕುಸುಮಾ ಪಾಟೀಲ, ನೇತ್ರಾವತಿ ಪಟ್ಟೇದ, ಎಂ.ಎಸ್. ಪೂಜಾರ, ರೈತರಾದ ವೀರಣ್ಣ ಕೊಡ್ಲಿವಾಡ, ಬಸನಗೌಡ ಪಾಟೀಲ, ಸಂತೋಷ ಕುರಿ ಇತರರಿದ್ದರು. ಕೃಷಿ ಸಹಾಯಕ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಸ್ವಾಗತಿಸಿದರು. ಕೆ.ಎ. ನದಾಫ್ ವಂದಿಸಿದರು.

ಮುಂಡರಗಿ : ಕೃಷಿ ಇಲಾಖೆ ತಾಲೂಕು ಕಚೇರಿಯಿಂದ ಬುಧವಾರ ಆಯೋಜಿಸಿದ್ದ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕ್ಕೆ ಕೃಷಿ ಜಿಲ್ಲಾ ಉಪ ನಿರ್ದೇಶಕ ಸಹದೇವಪ್ಪ ಯರಗೊಪ್ಪ ಚಾಲನೆ ನೀಡಿದರು.

ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಲು ಅವಶ್ಯಕ ತಂತ್ರಜ್ಞಾನ, ಏಕಗವಾಕ್ಷಿ ವಿಸ್ತರಣೆ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ಮುಟ್ಟಿಸುವುದೇ ಕೃಷಿ ಅಭಿಯಾನದ ಉದ್ದೇಶ ಎಂದರು.

ಕೃಷಿ ಇಲಾಖೆಯಿಂದ ತಾಲೂಕಿನ ಮೇವುಂಡಿ, ಡಂಬಳ, ಪೇಠಾಲೂರ, ಹಳ್ಳಿಕೇರಿ ಸೇರಿ 7 ಗ್ರಾಪಂಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ರೈತರ ಜಮೀನುಗಳಲ್ಲಿ ಒಡ್ಡು, ಕೃಷಿ ಹೊಂಡ ನಿರ್ವಿುಸಲಾಗುತ್ತಿದೆ ಎಂದರು.

ಸಹಾಯಕ ನಿರ್ದೇಶಕ ಎಸ್.ಬಿ. ನೆಗಳೂರ, ಕೃಷಿ ಸಹಾಯಕ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ, ಚಂದ್ರಶೇಖರ ಬಡಿಗೇರ, ರಾಘವೇಂದ್ರ ಕುರಿಯವರ, ಗೌರಿಶಂಕರ ಸಜ್ಜನರ, ಪ್ರಶಾಂತ ಕುರಿ, ಮಂಜುನಾಥ ಜೋಳದ, ವಿರೂಪಾಕ್ಷಪ್ಪ ಬಾರಕೇರ, ಮಲ್ಲಪ್ಪ ಕಲ್ಲಳ್ಳಿ, ಇತರರಿದ್ದರು.