ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ

ಲಿಂಗದಹಳ್ಳಿ: ಹೋಬಳಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರೇ ಹೆಚ್ಚಾಗಿ ವಾಸಿಸುತ್ತಿದ್ದು, ಮುಂಗಾರು ಹಂಗಾಮಿನ ಬೆಳೆಗಳ ಸಮಗ್ರ ವಿವರವನ್ನು 2 ದಿನಗಳ ಕಾಲ ಹೋಬಳಿಯ ಎಲ್ಲ ಗ್ರಾಮಗಳಿಗೂ ಕೃಷಿ ಅಭಿಯಾನ ರಥದ ಮೂಲಕ ತಿಳಿಸಬೇಕೆಂದು ತಾಪಂ ಸದಸ್ಯೆ ಹೇಮಾವತಿ ಪುಟ್ಟನಾಯ್ಕ ಹೇಳಿದರು.

ಗುರುವಾರ ಗ್ರಾಪಂ ಆವರಣದಲ್ಲಿ ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಚಾಲನೆ ನೀಡಿದ ಅವರು, ಜೂ.22ರ ಬೆಳಗ್ಗೆ 10ಕ್ಕೆ ಲಿಂಗದಹಳ್ಳಿ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆಯುವ ಕೃಷಿ ಅಭಿಯಾನ ಸಂವಾದದಲ್ಲಿ ಕೃಷಿ ಅಧಿಕಾರಿಗಳು, ತಜ್ಞರು ಕೃಷಿ ಹಾಗೂ ತಾಂತ್ರಿಕ ಮಾಹಿತಿ ನೀಡಲಿದ್ದಾರೆ. ಹೋಬಳಿಯ ಎಲ್ಲ ರೈತರೂ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಗ್ರಾಪಂ ಅಧ್ಯಕ್ಷ ಎಲ್.ಎನ್.ಲಿಂಗರಾಜು ಮಾತನಾಡಿ, ಕೃಷಿ ಅಭಿಯಾನದಲ್ಲಿ ನುರಿತ ಕೃಷಿ ತಜ್ಞರಿಂದ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಬೇಕು. ಕಳೆದ ಬಾರಿ ರಾಜಕಾರಣಿಗಳ ಭಾಷಣಗಳೇ ಹೆಚ್ಚಾಗಿತ್ತು ಎಂದರು. ಪಿಡಿಒ ರಾಕೇಶ್, ಗ್ರಾಪಂ ಸದಸ್ಯರು, ಪ್ರಗತಿಪರ ಕೃಷಿಕ ಪರಮೇಶ್ವರಪ್ಪ, ಕೃಷಿ ಅಧಿಕಾರಿ ಸೋಮಶೇಖರ್, ತೋಟಗಾರಿಕಾ ಇಲಾಖೆಯ ಬಾಬಣ್ಣ, ತಾಪಂ ಮಾಜಿ ಸದಸ್ಯ ಅಬ್ದುಲ್ ರೆಹಮಾನ್, ಬಿ.ಆರ್.ರವಿ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ, ರೈತ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *