ಸಮಗ್ರ ಕೃಷಿಯಿಂದ ಸ್ವಾವಲಂಬಿ ಬದುಕು

ಲಕ್ಷ್ಮೇಶ್ವರ: ರೈತನ ಬದುಕು ಹಸನಾಗಿಸಲು ಸರ್ಕಾರದ ಕೃಷಿ ಪೂರಕ ಸೌಲಭ್ಯಗಳ ಲಾಭ ಪಡೆದು ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿ ಜತೆಗೆ ವೈಜ್ಞಾನಿಕ, ಸಮಗ್ರ ಕೃಷಿ, ಮತ್ತಿತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.

ಅವರು ಜಿಪಂ, ಕೃಷಿ ಇಲಾಖೆ ಮತ್ತು ಕೃಷಿ ವಿವಿ ಧಾರವಾಡ ಆಶ್ರಯದಲ್ಲಿ ರೈತ ದಿನಾಚರಣೆ ಅಂಗವಾಗಿ ಭಾನುವಾರ ಪಟ್ಟಣದ ವೀರಗಂಗಾಧರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಭೂ ಸಂಪನ್ಮೂಲ ಮಾಹಿತಿ ಕಾರ್ಯಾಗಾರ, ಸಮಗ್ರ ಕೃಷಿ ಅಭಿಯಾನ ಹಾಗೂ ಜಿಲ್ಲಾ- ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿರು.

ರೈತರು ಮಣ್ಣಿನಲ್ಲಿನ ಪೋಷಕಾಂಶಗಳ ಪರೀಕ್ಷೆ ಮಾಡಿಸಿ ಮಣ್ಣಿನ ಗುಣಕ್ಕನುಗುಣವಾಗಿ ಬೆಳೆ ಬೆಳೆಯಲು ಮುಂದಾಗಬೇಕು. ಬರಗಾಲ, ಮಳೆ ಕೊರತೆ ಸಂಕಷ್ಟದಿಂದ ಪಾರಾಗಲು ಭೂಮಿಗೆ ತಿಪ್ಪೆ ಗೊಬ್ಬರ ಹಾಕಬೇಕು. ಹತ್ತಾರು ಸಮಸ್ಯೆಗಳ ನಡುವೆ ಕೃಷಿಯಲ್ಲಿಯೇ ಲಾಭ ಗಳಿಸುತ್ತಿರುವ ರೈತರ ಸಲಹೆ ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಜಗತ್ತಿಗೆ ಅನ್ನ ನೀಡುವ ರೈತನ ಶ್ರೇಯೋಭಿವೃದ್ಧಿ ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ರೈತರ ಅನಕೂಲಕ್ಕಾಗಿ ಸರ್ಕಾರ ಕೃಷಿ ಇಲಾಖೆ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ರೈತರು ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಹಂಜಿ, ಜಿಪಂ ಸದಸ್ಯೆ ದೇವಕ್ಕ ಲಮಾಣಿ, ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಜಯಲಕ್ಷ್ಮೀ ಗಡ್ಡದೇವರಮಠ, ತಹಸೀಲ್ದಾರ್ ಕೆ.ಬಿ. ಕೋರಿಶೆಟ್ಟರ, ತಿಪ್ಪಣ್ಣ ಕೊಂಚಿಗೇರಿ, ಅಶೋಕ ಬಟಗುರ್ಕಿ, ನಿಂಗಪ್ಪ ಬನ್ನಿ, ಮಹೇಶ ಹೊಗೆಸೊಪ್ಪಿನ, ವೀರನಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ, ಎ.ಸಿ. ಭಗವತಿ, ಕೆ.ಎ. ನಧಾಪ್, ಬಿ.ಕೆ. ಹೊನ್ನಪ್ಪನವರ, ಎಸ್.ಬಿ. ಲಮಾಣಿ, ಎಂ.ಎಚ್. ಹಣಗಿ, ವೈ.ಕೆ. ಬಂಗಾರಿ, ಇತರಿದ್ದರು.

ಸಹದೇವ ಯರಗೊಪ್ಪ , ಈಶ್ವರ ಮೆಡ್ಲೇರಿ ನಿರೂಪಿಸಿದರು. ಜೈಕರ್ನಾಟಕ ಕಲಾ ತಂಡದವರು ಕೃಷಿ ಸಂಬಂಧಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಗತಿಪರ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಪ್ರದರ್ಶಿಸಿದರು.

ಯೋಜನೆ ಲಾಭ ಪಡೆಯಿರಿ

ಜಂಟಿ ಕೃಷಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ ಮಾತನಾಡಿ, ಸರ್ಕಾರ ಕೃಷಿ ಕ್ಷೇತ್ರದ ಅಮೂಲಾಗ್ರ ಬೆಳವಣಿಗೆ ಸಮಗ್ರ ಕೃಷಿ ಅಭಿವೃದ್ಧಿ, ಸಾವಯವ ಭಾಗ್ಯ, ಜಲಾನಯನಭಿವೃದ್ಧಿ, ಮಣ್ಣು ಆರೋಗ್ಯ ಪರೀಕ್ಷೆ, ಕೃಷಿ ಯಂತ್ರಧಾರೆ, ಬೆಳೆವಿಮೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ರೈತರು ಅವುಗಳ ಲಾಭ ಪಡೆದುಕೊಳ್ಳಬೇಕು ಎಂದರು.

ಮಣ್ಣು ಪರೀಕ್ಷೆ ಅಗತ್ಯ

ಕೃಷಿ ವಿವಿ ವಿಜ್ಞಾನಿ ಪಿ.ಎಲ್. ಪಾಟೀಲ ಮಾತನಾಡಿ, ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಜಲಾನಯನ ಯೋಜನೆಯಡಿ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಸುಜಲಾ- 3 ಸೌಲಭ್ಯ ಕಲ್ಪಿಸಿದೆ. ಇದರಡಿ ಮಣ್ಣು ಮತ್ತು ನೀರಿನಲ್ಲಿನ ಪೋಷಕಾಂಶಗಳ ಮಾಹಿತಿ ಪಡೆದು ಅದಕ್ಕನುಗುಣವಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನಕೂಲವಾಗುತ್ತದೆ ಎಂದರು.

ಪುಸ್ತಕ ಬಿಡುಗಡೆ

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇಹ ಯರಗೊಪ್ಪ ಅವರು ಬರೆದ ಶ್ರೇಷ್ಠ ಕೃಷಿ ಸಾಧಕರು ಮತ್ತು ಕೃಷಿ ಸಂಬಂಧಿತ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಮಟ್ಟದ 7 ಜನ ಮತ್ತು ತಾಲೂಕು ಮಟ್ಟದ 22 ಶ್ರೇಷ್ಠ ಕೃಷಿಕರಿಗೆ ನಗದು ಮತ್ತು ಪಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.