ಮಂಡ್ಯ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿ ಆಯೋಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಪಾಲನಾ ವರದಿ ಬಗ್ಗೆ ಕೆಲವೊತ್ತು ಚರ್ಚೆ ನಡೆಯಿತು.
ಆಯೋಗದ ರಾಷ್ಟ್ರೀಯ ಸದಸ್ಯ ಜಗದೀಶ್ ಹಿರೇಮಣಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯ ಪ್ರಾರಂಭದಲ್ಲಿ ಅನುಪಾಲನಾ ವರದಿ ಮಂಡಿಸುವಂತೆ ಸೂಚಿಸಲಾಯಿತು.
ಆದರೆ, ಹಿಂದಿನ ಸಭೆಯ ಅನುಪಾಲನಾ ವರದಿ ಇಲ್ಲವೆಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿವಿಧ ಸಂಘಟನೆಯ ಮುಖಂಡರು, ಇದು ಅಧಿಕಾರಿಗಳ ನಿರ್ಲಕ್ಷ್ಯ. ಹೀಗಾದರೆ ದುಡಿಯುವ ಸಮುದಾಯದ ಅಭಿವೃದ್ಧಿ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಈ ವೇಳೆ ಡಿಸಿ ಡಾ.ಎಂ.ವಿ.ವೆಂಕಟೇಶ್ ಪ್ರತಿಕ್ರಿಯಿಸಿ, ಈ ಸಭೆ ಸೇರಿದಂತೆ ಹಿಂದಿನ ಸಭೆಗಳ ಅನುಪಾಲನಾ ವರದಿಯನ್ನು ಸಿದ್ದಪಡಿಸಿ ಜಾಗೃತ ಸಮಿತಿ ಸಭೆಗೆ ನೀಡುವಂತೆ ಸೂಚಿಸಿದರು.