ಸಬ್​ಜೈಲ್ ಎದುರೇ ಗ್ಯಾಂಗ್​ವಾರ್!

ಹುಬ್ಬಳ್ಳಿ: ಹಾಡಹಗಲೇ ಇಲ್ಲಿನ ವಿಶ್ವೇಶ್ವರ ನಗರದ ಉಪ ಕಾರಾಗೃಹದ ಎದುರು ಬುಧವಾರ ಮಧ್ಯಾಹ್ನ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದೆ. 30ಕ್ಕೂ ಹೆಚ್ಚು ಯುವಕರ ಗುಂಪು ತಲ್ವಾರ್ ಹಿಡಿದು ಮತ್ತೊಂದು ಯುವಕರ ಗುಂಪಿನ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಓರ್ವನ ಕೈಬೆರಳು ಕಟ್ ಆಗಿದ್ದು, ಮಾರುತಿ ಸಿಯಾಜ್ ಕಾರು ಜಖಂಗೊಂಡಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಘ್ನ ವಾತಾವರಣ ನಿರ್ವಣವಾಗಿತ್ತು.

ಹಳೇ ಹುಬ್ಬಳ್ಳಿಯ ಜುನೇದ ಮುಲ್ಲಾ ಎಂಬಾತನ ಕೈಬೆರಳು ಕಟ್ ಆಗಿದೆ. ಹಳೇ ಹುಬ್ಬಳ್ಳಿಯ ಗಿರೀಶ (ಗಿರಿ) ಮಹಾಂತಶೆಟ್ಟರ್ ಹಾಗೂ ರವಿ ಜಾಧವ ತಂಡಗಳ ನಡುವೆ ಮಾರಾಮಾರಿ ನಡೆದಿದೆ.

ಜೂ.7ರಂದು ನೇಕಾರ ನಗರದ ರಾಘವೇಂದ್ರ ಸರ್ಕಲ್​ನಲ್ಲಿ ಹಳೇ ವೈಷಮ್ಯದ ಕಾರಣಕ್ಕೆ ಸೆಟ್ಲಮೆಂಟ್ ಮೂಲದ ಶ್ಯಾಮ್ ಜಾಧವ ಗುಂಪಿನ ಹುಸೇನ್ ಬಿಜಾಪುರ ಎಂಬಾತನಿಗೆ ಚಾಕು ಇರಿಯಲಾಗಿತ್ತು. ಆ ಕುರಿತು ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಿರೀಶ ಮಹಾಂತಶೆಟ್ಟರ್ ಸೇರಿ ಐವರನ್ನು ಪೊಲೀಸರು ಬಂಧಿಸಿ, ಉಪ ಕಾರಾಗೃಹದಲ್ಲಿ ಇರಿಸಿದ್ದಾರೆ. ಬುಧವಾರ ವಿಚಾರಣೆಗೆಂದು ಗಿರಿ ಹಾಗೂ ಸಹಚರರನ್ನು ಜೈಲಿನಿಂದ ಕೋರ್ಟ್​ಗೆ ಕರೆದುಕೊಂಡು ಹೋಗಲಾಗಿತ್ತು. ವಾಪಸ್ ಜೈಲಿಗೆ ಬಂದ ಬಳಿಕ ಅವರನ್ನು ಭೇಟಿಯಾಗಿ ಊಟ ಕೊಡಲೆಂದು ಗಿರಿ ಸಹೋದರ ರವಿ ಹಾಗೂ ಹತ್ತಾರು ಸ್ನೇಹಿತರು ಸಬ್ ಜೈಲ್ ಬಳಿ ಬಂದಿದ್ದರು.

ಆ ಸಮಯವನ್ನೇ ಕಾದು ಕುಳಿತಿದ್ದ ರವಿ ಜಾಧವ ಹಾಗೂ ಅಭಿಷೇಕ ಜಾಧವ ತಂಡದವರು ಎನ್ನಲಾದ 30ಕ್ಕೂ ಹೆಚ್ಚು ಹುಡುಗರು ತಲ್ವಾರ್ ಮತ್ತಿತರ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು. ಹಾಕಿ ಸ್ಟಿಕ್​ನಿಂದ ಗಿರೀಶ ಕಡೆಯವರ ಕಪ್ಪು ಬಣ್ಣದ ಮಾರುತಿ ಸಿಯಾಜ್ ಕಾರಿನ ಗಾಜು ಪುಡಿ ಪುಡಿ ಮಾಡಿ, ಕಲ್ಲು ತೂರಿದರು. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದರು. ಗಿರಿ ಕಡೆಯ ಯುವಕರು ತಪ್ಪಿಸಿಕೊಂಡು ಪರಾರಿಯಾದರು. ಗಾಯಗೊಂಡಿರುವ ಜುನೇದ ಮುಲ್ಲಾನನ್ನು ಕಿಮ್ಸ್​ಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಉತ್ತರ ಉಪ ವಿಭಾಗದ ಎಸಿಪಿ ಎಚ್.ಕೆ. ಪಠಾಣ, ಅಶೋಕನಗರ ಠಾಣೆ ಇನ್ಸ್​ಪೆಕ್ಟರ್ ಜಗದೀಶ ಹಂಚಿನಾಳ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. 1 ಕಾರು ಹಾಗೂ ಎಂಟು ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ವಾರ್ಟರ್ಸ್​ಗೆ ನುಗ್ಗಿದರು !: ರೌಡಿಗಳ ಗುಂಪು ಅಟ್ಯಾಕ್ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಗಿರಿ ಕಡೆಯವರು ಸಬ್ ಜೈಲ್ ಪಕ್ಕದ ಕ್ವಾರ್ಟರ್ಸ್​ಗೆ ನುಗ್ಗಿ ಬಚ್ಚಿಟ್ಟುಕೊಂಡರು. ಮತ್ತೆ ಕೆಲವರು ಜೈಲು ಹಿಂಭಾಗದ ನೀರಿನ ಟ್ಯಾಂಕ್, ನೃಪತುಂಗ ಬೆಟ್ಟದ ಕಡೆಗೆ ಓಡಿ ಹೋಗಿ ತಪ್ಪಿಸಿಕೊಂಡರು. ಹೀಗಾಗಿ, ಬೈಕು, ಕಾರುಗಳಿಗೆ ಹಾಕಿ ಸ್ಟಿಕ್​ನಿಂದ ಹೊಡೆದು ಪರಾರಿಯಾದರು ಎಂದು ಹೇಳಲಾಗಿದೆ.

ಸಬ್​ಜೈಲ್​ಗೆ ಸಿಸಿಟಿವಿ ಇಲ್ಲ: ಎಂಟು ವರ್ಷಗಳ ಹಿಂದೆ ರೌಡಿಗಳ ದೊಂಬಿಯಿಂದ ಹುಬ್ಬಳ್ಳಿ ಉಪ ಕಾರಾಗೃಹ ಕುಖ್ಯಾತಿಗೆ ಒಳಗಾಗಿತ್ತು. ಅದಾಗ್ಯೂ ಬಂದೀಖಾನೆ ಇಲಾಖೆ ಸಿಸಿಟಿವಿ ಕ್ಯಾಮರಾವನ್ನೂ ಅಳವಡಿಸದಿರುವುದು ಇಲಾಖೆಯ ನಿರ್ಲಕ್ಷ್ಯ್ಕೆ ಹಿಡಿದ ಕೈಗನ್ನಡಿಯಾಗಿದೆ.

ಘಟನೆಗೆ ಶ್ಯಾಮ್ ಜಾಧವ್ ಕಾರಣ?: ನನ್ನ ಸಹೋದರ ಗಿರೀಶ ಮಹಾಂತಶೆಟ್ಟರ್​ಗೆ ಊಟ ಕೊಟ್ಟು ಮಾತನಾಡಿಸಲು ಸ್ನೇಹಿತರೊಂದಿಗೆ ಬಂದಿದ್ದೆ. ಆಗ ಶ್ಯಾಮ್ ಜಾಧವ್ ಕಡೆಯ 30ಕ್ಕೂ ಹೆಚ್ಚು ಜನರು ತಲ್ವಾರ್ ಹಿಡಿದುಕೊಂಡು ಏಕಾಏಕಿ ನಮ್ಮ ಮೇಲೆ ದಾಳಿ ಮಾಡಿದರು. ಹಳೇ ವೈಷಮ್ಯದಿಂದ ಹೀಗೆ ಮಾಡಿದ್ದಾರೆ. ಶ್ಯಾಮ್ೆ ಬೈದಿದ್ದಕ್ಕೆ ಈ ಕೃತ್ಯವೆಸಗಿದ್ದಾರೆ. ತಂಡದಲ್ಲಿ ಗಡಗಿ ಚಂದ್ರ, ಅಭಿಷೇಕ ಜಾಧವ, ಗಣೇಶ ಜಾಧವ, ರವಿ, ಜಾಧವ, ರಾಘ್ಯಾ ಮತ್ತಿತರರು ಇದ್ದರು. ಎಲ್ಲ ಶ್ಯಾಮ್ ಜಾಧವ್ ಮಾತು ನಡೆಯುತ್ತಿದೆ. ಅವನೇ ಇದನ್ನೆಲ್ಲ ಮಾಡಿಸಿದ್ದಾನೆ ಎಂದು ಬಂಧಿತ ಗಿರೀಶ ಸಹೋದರ ರವಿ ಮಹಾಂತಶೆಟ್ಟರ್ ಆರೋಪಿಸಿದ್ದಾರೆ.

ಪಾತಕಿಗಳು ಪಾರು: ಉಪ ಬಂದೀಖಾನೆ ಬಳಿ ಮಾರಾಮಾರಿ ನಡೆಸಿದ 30 ಕ್ಕೂ ಹೆಚ್ಚು ಯುವಕರು ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.

Leave a Reply

Your email address will not be published. Required fields are marked *