ಸಫಾರಿ ಬಳಕೆಗಿಲ್ಲ ಸಾಹೇಬರ ಜೀಪು!

ಗುರುಪ್ರಸಾದ್ ತುಂಬಸೋಗೆ
ಕಾಡಿನ ವ್ಯಾಪ್ತಿಯಲ್ಲಿ ನಡೆಯುವ ಸಫಾರಿಗೆ ನಿಗದಿಪಡಿಸಿರುವ ವಾಹನಗಳನ್ನು ಬಿಟ್ಟು ಅರಣ್ಯಾಧಿಕಾರಿಗಳ ಜೀಪುಗಳ ಬಳಕೆಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ಹುಲಿ ಸಂರಕ್ಷಿತಾ ಪ್ರದೇಶ, ರಾಷ್ಟ್ರೀಯ ಉದ್ಯಾನವನಗಳು, ವನ್ಯಧಾಮಗಳಲ್ಲಿ ಸಫಾರಿಗಾಗಿಯೇ ವಾಹನಗಳನ್ನು ಬಳಸಲಾಗುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್), ವಲಯ ಅರಣ್ಯಾಧಿಕಾರಿಗಳ (ಆರ್‌ಎಫ್‌ಒ) ವಾಹನಗಳನ್ನು ಬಳಸಿಕೊಂಡು ಹಣ ಪಡೆಯುತ್ತಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಫಾರಿಗೆ ನಿಗದಿಪಡಿಸಿರುವ ವಾಹನಗಳನ್ನು ಬಿಟ್ಟು ಬೇರೆ ವಾಹನಗಳಲ್ಲಿ ಸಫಾರಿಗೆ ಕಳುಹಿಸಬಾರದೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯಪಡೆ ಮುಖ್ಯಸ್ಥರು) ಆದೇಶಿಸಿದ್ದಾರೆ.
ಅರಣ್ಯ ಸಫಾರಿ ಎಂದರೆ ವನ್ಯಜೀವಿಗಳ ವೀಕ್ಷಣೆ ಹಾಗೂ ಪರಿಸರ ಪ್ರೀತಿಯಾಗಿದ್ದು, ದೇಶದಲ್ಲೇ ಹುಲಿ ಹೆಚ್ಚಾಗಿರುವ ಬಂಡೀಪುರ, ನಾಗರಹೊಳೆಯ ಅರಣ್ಯ ಪ್ರದೇಶದಲ್ಲಿ ಸಫಾರಿ ನಡೆಯುತ್ತಿದೆ. ವನ್ಯಜೀವಿಗಳ ಮೇಲಿನ ಕ್ರೇಜ್ ಮತ್ತು ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಜನರು ವೀಕೆಂಡ್ ಮತ್ತು ರಜೆ ದಿನಗಳಲ್ಲಿ ಅರಣ್ಯದತ್ತ ದಾಂಗುಡಿಯಿಡುತ್ತಿದ್ದಾರೆ.
ಪರಿಸರ ಪ್ರವಾಸೋದ್ಯಮದ ಹೆಸರಿನ ರೆಸಾರ್ಟ್ ಸಂಸ್ಕೃತಿ ಸೋಕಿದ ಮೇಲಂತೂ ಕಾಡಿನತ್ತ ಬರುವ ಜನರು ಸಂಖ್ಯೆ ಮಿತಿ ಮೀರಿತ್ತು. ಕೆಲವರು ಪ್ರಭಾವಿಗಳು, ಜನಪ್ರತಿನಿಧಿಗಳು, ಮೇಲಧಿಕಾರಿಗಳು ಕಡೆಯಿಂದ ಸಫಾರಿಗೆ ಬರುವುದು ಮಾಮೂಲಿಯಾಗಿತ್ತು. ಈ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾದಾಗ ಸಫಾರಿಗೆ ನಿಗದಿಪಡಿಸಿದ ಬಸ್ ಮತ್ತು ಜೀಪುಗಳ ಜತೆಗೆ ಅಧಿಕಾರಿಗಳು ತಮ್ಮ ವಾಹನಗಳನ್ನು ಬಳಸುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಆದೇಶವನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ಬಂಡೀಪುರದಲ್ಲಿ ಕೈಗೆ ಬ್ಯಾಂಡ್!
ಟಿಕೆಟ್ ಇಲ್ಲದೇ ಸಫಾರಿಗೆ ಬರುವವರನ್ನು ತಡೆಯಲು ಬಂಡೀಪುರದಲ್ಲಿ ಟಿಕೆಟ್ ಖರೀದಿಸಿದವರ ಕೈಗೆ ಬ್ಯಾಂಡ್ ಕಟ್ಟಲಾಗುತ್ತಿದೆ. ಜನಸಾಮಾನ್ಯರು ವನ್ಯಜೀವಿಗಳ ನೇರ ದರ್ಶನ ಹಾಗೂ ಕಾಡು ವೀಕ್ಷಿಸಲೆಂದೇ ಸಫಾರಿ ರೂಪಿಸಲಾಗಿದ್ದು, ಸಾಕಷ್ಟು ಪ್ರಾಣಿಪ್ರಿಯರು ಸಫಾರಿ ಉಪಯೋಗ ಪಡೆಯುತ್ತಲೇ ಇದ್ದಾರೆ. ಆದರೆ ಪ್ರಭಾವಿಗಳ ಹೆಸರು ಮತ್ತು ಮೇಲಧಿಕಾರಿಗಳ ಶಿಫಾರಸು ಬಳಸಿಕೊಂಡು ಸಫಾರಿಗೆ ಬರುತ್ತಿದ್ದವರು ಟಿಕೆಟ್ ಖರೀದಿಸುತ್ತಿರಲಿಲ್ಲ. ಇದನ್ನು ನಿಯಂತ್ರಿಸುವುದು ಕೆಳ ಹಂತದ ಸಿಬ್ಬಂದಿಗೂ ಕಷ್ಟವಾಗಿತ್ತು. ಇದನ್ನು ತಡೆಯುವ ಉದ್ದೇಶದಿಂದ ಟಿಕೆಟ್ ಖರೀದಿಸಿದರೆ ಹಸಿರು ಮತ್ತು ನೀಲಿ ಬಣ್ಣದ ಬ್ಯಾಂಡ್ ನೀಡಲಾಗುತ್ತದೆ. ಅದನ್ನು ಕೈಗೆ ಧರಿಸಿ ಸಫಾರಿ ವಾಹನ ಹತ್ತಬೇಕು. ಈ ಮೂಲಕ ಟಿಕೆಟ್ ಖರೀದಿಸದೆ ಸಫಾರಿ ಮಾಡುವುದನ್ನು ತಡೆಯುವುದು ಅರಣ್ಯ ಇಲಾಖೆಯ ಲೆಕ್ಕಾಚಾರವಾಗಿದೆ. ಇದರಿಂದ ಟಿಕೆಟ್ ಖರೀದಿಸದವರು ಮುಜುಗರವನ್ನು ಅನುಭವಿಸುವುದು ನಿಶ್ಚಿತ.
ಜಿಪಿಎಸ್ ಅಳವಡಿಕೆ
ಈಗಾಗಲೇ ಬಂಡೀಪುರ ಹುಲಿ ಯೋಜನೆಯ ಸಫಾರಿ ವಾಹನಗಳ ಚಾಲಕರ ಮೇಲೆ ನಿಗಾ ಇಡಲು ಮತ್ತು ಪ್ರವಾಸಿಗರ ಸುರಕ್ಷತೆ ಸಲುವಾಗಿ ಸಫಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ.

ಬ್ಯಾಂಡ್ ಧರಿಸದೆ ಸಫಾರಿ ವಾಹನ ಏರಿದರೆ ಅವರು ಟಿಕೆಟ್ ಖರೀದಿಸಿಲ್ಲ ಎಂದರ್ಥ. ಮುಂದಿನ ದಿನಗಳಲ್ಲಿ ಸ್ಕಾೃನ್ ಮಾಡುವ ಪದ್ಧತಿ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ.
ರವಿಕುಮಾರ್, ಬಂಡೀಪುರ ಎಸಿಎಫ್

ಸಫಾರಿ ಸಂದರ್ಭದಲ್ಲಿ ಅಧಿಕಾರಿಗಳ ಜೀಪು ದುರುಪಯೋಗವಾಗುತ್ತಿದೆ ಎಂಬ ಅಂಶ ಗಮನಕ್ಕೆ ಬಂದಿತ್ತು. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪುನಟಿ ಶ್ರೀಧರ್, ಪಿಸಿಸಿಎಫ್

Leave a Reply

Your email address will not be published. Required fields are marked *