ಸಪ್ತ ಮಹಾರಾಜರ ಪುಣ್ಯಧಾಮ

| ಭಾವುರಾಜ ಕೆ. ಈಸರಗೊಂಡ

ಪುಣ್ಯಪುರುಷರ ಪಾದಸ್ಪರ್ಶದಿಂದ ಪುನೀತವಾದ ವಿಜಯಪುರ ಜಿಲ್ಲೆಯ ದೇವರನಿಂಬರಗಿ, ಇಂಚಗೇರಿ, ನಿಂಬಾಳ, ಮಹಾರಾಷ್ಟ್ರದ ಉಮದಿ, ಜತ್ತ, ಬಾಗಲಕೋಟ ಜಿಲ್ಲೆಯ ಜಮಖಂಡಿ, ಚಿಮ್ಮಡ ಮುಂತಾದ ಊರುಗಳು ಅಧ್ಯಾತ್ಮಲೋಕದ ಧ್ರುವತಾರೆಯಂತಿರುವ ಶ್ರೀ ಗುರುಲಿಂಗ ಜಂಗಮ ಮಹಾರಾಜರ ದಿವ್ಯಸಾನ್ನಿಧ್ಯದಿಂದ ಹೆಸರುವಾಸಿಯಾಗಿ ಸಪ್ತ ಮಹಾರಾಜರ ಪುಣ್ಯಧಾಮವಾಗಿದೆ.

ಕ್ಷೇತ್ರದ ಪರಂಪರೆ

ಶ್ರೀಕ್ಷೇತ್ರ ಇಂಚಗೇರಿಮಠದ ಮೊದಲ ಗುರು ದೇವರನಿಂಬರಗಿಯ ಗುರುಲಿಂಗ ಜಂಗಮ ಮಹಾರಾಜರು. ಮಹಾರಾಷ್ಟ್ರದ ಉಮದಿಯ ಶ್ರೀ ಭಾವೂಸಾಹೇಬ ಮಹಾರಾಜರು, ಜಮಖಂಡಿಯ ಐನಾಥ ಪ್ರಭು ಹಾಗೂ ಗಿರಿಮಲ್ಲೇಶ್ವರ ಮಹಾರಾಜರು, ಹುಬ್ಬಳ್ಳಿಯ ಶಿವಪ್ರಭು ಮಹಾರಾಜರು, ಶ್ರೀ ಮಾಧವಾನಂದ ಪ್ರಭುಜಿ, ಶ್ರೀ ಗುರುಪುತ್ರೇಶ್ವರ ಮಹಾರಾಜರು, ಶ್ರೀ ಜಗನ್ನಾಥ ಮಹಾರಾಜರು, ಸದ್ಯದ ಶ್ರೀ ಸ. ಸ. ರೇವಣಸಿದ್ಧೇಶ್ವರ ಮಹಾರಾಜರು – ಹೀಗೆ ಗುರುಪರಂಪರೆ ಉತ್ತರೋತ್ತರವಾಗಿ ಸಾಗಿಬಂದಿದೆ.

ಅಧ್ಯಾತ್ಮ ಸಾಧನೆ

ಮೊದಲ ಗುರು ಶ್ರೀ ಗುರುಲಿಂಗ ಜಂಗಮ ಮಹಾರಾಜರು ಜೀವಿತಾವಧಿಯಲ್ಲಿ ಕೇವಲ ನಾಮಸ್ಮರಣೆ, ನಾಮಸಾಧನದ ಬಲದಿಂದ ಆತ್ಮಸಾಕ್ಷಾತ್ಕಾರವನ್ನು ಸಂಪಾದಿಸಿದ ಮಹಾಮಹಿಮರು. ಅದ್ಭುತವಾಗಿ ಅತೀಂದ್ರಿಯ ಶಕ್ತಿಯನ್ನು ಮೆರೆದರೆಂದು ಪ್ರತೀತಿ ಇದೆ. ಅವರ ಶಿಷ್ಯ ಶ್ರೀ ಭಾವೂಸಾಹೇಬ ಮಹಾರಾಜರು ಇಂದ್ರಿಯಾತೀತ ಅನುಭವ ಸಂಪನ್ನರಾಗಿದ್ದರು. ಲೌಕಿಕ ಪರಮಾರ್ಥಗಳೆರಡನ್ನೂ ಸಮಾನವಾಗಿ ತೂಗಿ ತಮ್ಮ ಹಾಗೂ ಸುತ್ತಲಿನ ಜನರ ಬಾಳನ್ನು ಆಧ್ಯಾತ್ಮಿಕತೆಯ ಪ್ರಕಾಶದಿಂದ ಉಜ್ವಲಗೊಳಿಸಿದರು. ತಮ್ಮ ಬದುಕಿನಲ್ಲಿ ಎದುರಾದ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಅನೇಕರು ಅವರಲ್ಲಿಗೆ ಬರುತ್ತಿದ್ದರು. ಮೂಲತಃ ಉಮದಿಯ ಭಾವೂಸಾಹೇಬ ಮಹಾರಾಜರು ವೃತ್ತಿಯಿಂದ ಸ್ಟಾಂಪ್ ವೆಂಡರ್ ಆಗಿದ್ದರು. ಸರ್ಕಾರಿ ಕಾಗದಪತ್ರಗಳನ್ನು ಬರೆದುಕೊಟ್ಟು ಜನರಿಂದ ಅಲ್ಪಸಂಭಾವನೆ ಪಡೆಯುತ್ತಿದ್ದರು. ಒಮ್ಮೆ ತೀವ್ರವಾಗಿ ಕಜ್ಜಿಯ ರೋಗಕ್ಕೆ ಗುರಿಯಾಗಿ ಬಹಳ ಕಷ್ಟ ಅನುಭವಿಸಿದರು. ಆತ್ಮಾವಲೋಕನ ಮಾಡಿಕೊಂಡಾಗ ಗುರುಗಳಾದ ಗುರುಲಿಂಗಜಂಗಮ ಮಹಾರಾಜರು ಹೀಗೆ ಹೇಳಿದ್ದನ್ನು ಜ್ಞಾಪಿಸಿಕೊಂಡರು. ಅವರು, ‘ಒಂದು ಮುಳ್ಳು ನೆಟ್ಟರೂ ಅದು ನಿನ್ನ ಯಾವ್ಯಾವ ಗುಣಕ್ಕಾಗಿ ನೆಟ್ಟಿರಬಹುದು ಎಂದು ವಿಚಾರಿಸಿಕೋ’ ಎಂದಿದ್ದರು. ತಾನು ಯಾವುದೋ ಅಪಕೃತ್ಯವೆಸಗಿದುದ್ದಕ್ಕಾಗಿ ಈ ರೋಗ ತನ್ನನ್ನು ಕಾಡುತ್ತಿದೆ ಎಂಬುದು ಮನವರಿಕೆಯಾಯಿತು. ಅನಂತರದ ದಿನಗಳಲ್ಲಿ ಅವರು ತಮ್ಮ ವೃತ್ತಿಯನ್ನು ತ್ಯಜಿಸಿದರು. ಕಜ್ಜಿ ವಾಸಿಯಾಯಿತು.

1903ರಲ್ಲಿ ಗುಣವಾಗದ ಕಾಯಿಲೆ ಕಾಡಿತು. ನನ್ನ ಆಯಸ್ಸು ಅರವತ್ತು ವರ್ಷ. 1903ಕ್ಕೆ ಅರವತ್ತು ತುಂಬಿತು. ಇನ್ನು ದೇಹತ್ಯಾಗ ಮಾಡುವೆ ಎಂದರು. ಆಗ ಶಿಷ್ಯರು, ನೀವಿನ್ನೂ ದೀರ್ಘಕಾಲ ಬದುಕಬೇಕೆಂದು ಬೇಡಿಕೊಂಡರಂತೆ. ಅನಂತರ ಭಾವೂಸಾಹೇಬರು ತಮ್ಮ ಆಯುಷ್ಯವನ್ನು 10 ವರ್ಷ ವರ್ಧಿಸಿಕೊಂಡು 1913ರಲ್ಲಿ ದೇಹತ್ಯಾಗ ಮಾಡಿದರು. ಇವರ ತರುವಾಯ ಬಂದವರು ಶ್ರೀ ಗಿರಿಮಲ್ಲೇಶ್ವರ ಮಹಾರಾಜರು. ಜಮಖಂಡಿಯ ಇವರು ಹುಬ್ಬಳ್ಳಿ, ಜಮಖಂಡಿ, ಬನಹಟ್ಟಿ, ಹಿಪ್ಪರಗಿ, ಜತ್ತ, ಜುನೋನಿ, ನಂದೇಶ್ವರ, ಸಾಂಗಲಿ ಮುಂತಾದೆಡೆ ಸಂಚರಿಸಿ ಭಕ್ತಿಪ್ರಚಾರ ಕೈಕೊಂಡು 1934ರಲ್ಲಿ ಲಿಂಗೈಕ್ಯರಾದರು. ಶ್ರೀ ಗುರುಪುತ್ರೇಶ್ವರ ಮಹಾರಾಜರು ದೇಶ-ವಿದೇಶಗಳಲ್ಲೆಲ್ಲ ಅಧ್ಯಾತ್ಮ ತತ್ವಬೋಧನೆ ಮಾಡಿಸಿ 1996ರಲ್ಲಿ ಲಿಂಗೈಕ್ಯರಾದರು. ಶ್ರೀ ಜಗನ್ನಾಥ ಮಹಾರಾಜರು ಗುರುಪುತ್ರೇಶ್ವರ ಮಹಾರಾಜರ ಜತೆಗೂಡಿ ದೇಶಾದ್ಯಂತ ಸಂಚರಿಸಿ ಹಲವು ವಿಧಾಯಕ ಕಾರ್ಯಗಳನ್ನು ಪ್ರಚುರಪಡಿಸಿದ್ದಾರೆ.

ಈಗಿರುವ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು; ಸಾಮೂಹಿಕ ಕೃಷಿ, ಸಾಮೂಹಿಕ ಭೋಜನ, ಸಾಮೂಹಿಕ ಶ್ರಮದಾನ, ವರ್ಷದಲ್ಲಿ ಐದು ಸಪ್ತಾಹ, ಎರಡು ಸಲ ದಿಂಡಿ ಪಲ್ಲಕ್ಕಿ ಪಾದಯಾತ್ರೆ, ಒಂದು ತಿಂಗಳ ಸವೋದಯ ಪಾದಯಾತ್ರೆ, ಮಾಘ ಮತ್ತು ಮಹಾದೇವರ ಸಪ್ತಾಹದಲ್ಲಿ ಕೋಮು ಸೌಹಾರ್ದತೆ ಹಾಗೂ ವಿಶ್ವಶಾಂತಿಗಾಗಿ ಸರ್ವಧರ್ಮ ಸಮ್ಮೇಳನ, ಮುಂತಾದ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇದೇ ಜ. 18ರಿಂದ 21ರವರೆಗೆ ನಾಲ್ಕು ದಿನಗಳವರೆಗೆ ಶ್ರೀ ಭಾವೂಸಾಹೇಬ, ಶ್ರೀ ಗಿರಿಮಲ್ಲೇಶ್ವರ, ಶ್ರೀ ಗುರುಪುತ್ರೇಶ್ವರ ಹಾಗೂ ಶ್ರೀ ಜಗನ್ನಾಥ ಮಹಾರಾಜರ ಚತುರ್ವೆಣಿ ಪುಣ್ಯತಿಥಿ ಹಾಗೂ ಮಾಘ ಸಪ್ತಾಹ ಜರುಗಲಿದೆ. ಈ ಉತ್ಸವಕ್ಕೆ ಕರ್ನಾಟಕವಷ್ಟೇ ಅಲ್ಲದೆ ಮಹಾರಾಷ್ಟ್ರ, ಗೋವಾ ಮತ್ತು ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ.

Leave a Reply

Your email address will not be published. Required fields are marked *