ಸಪ್ತಪದಿ ತುಳಿದ ಅಂಧ ವಧು-ವರ

ಕೋಲಾರ: ವರ ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವ ಪದ್ಧತಿ ಹಿಂದು ವಿವಾಹದ ಶಾಸ್ತ್ರದ ಒಂದು ಭಾಗ. ಆದರೆ ನಕ್ಷತ್ರ ತೋರಿಸಲು ಹಾಗೂ ನೋಡಲು ವಧು-ವರರಿಗೆ ದೃಷ್ಟಿಯಿಲ್ಲ. ಆದರೂ ಒಳಗಣ್ಣಿನಿಂದಲೇ ನಕ್ಷತ್ರ ನೋಡುವ ಮೂಲಕ ಅಂಧರು ಸತಿಪತಿಗಳಾದರು.

ಇಂತಹ ಮಂಗಳ ಕಾರ್ಯದಲ್ಲಿ ಸತಿಪತಿಗಳಾದವರು ಶಿವಕುಮಾರ್(30) ಮತ್ತು ಅನಸೂಯಮ್ಮ (25). ಕೋಲಾರ ತಾಲೂಕಿನ ಜಂಗಮ ಬಸಾಪುರ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ 5.30ರಿಂದ 6 ಗಂಟೆ ಒಳಗಿನ ಲಗ್ನದ ಮುಹೂರ್ತದಲ್ಲಿ ಕಲ್ಯಾಣ ಮಹೋತ್ಸವ ನಡೆಯಿತು. ದೇವಾಲಯ ಅರ್ಚಕರಾದ ಭರತ್ ಮತ್ತು ಶಂಕರಪ್ಪ ಯಾವುದೇ ದಕ್ಷಿಣೆಯಂತಹ ಪ್ರತಿಫಲಾಪೇಕ್ಷೆ ಇಲ್ಲದೆ ಮದುವೆ ನಡೆಸಿಕೊಟ್ಟು ನೂತನ ವಧುವರರನ್ನು ಹರಸಿದರು.

ಸರಳ ವಿವಾಹದಲ್ಲಿ ಸಂಬಂಧಿಕರಾದ ನಾರಾಯಣಸ್ವಾಮಿ, ಕೆರೆಗಳ ಮುನಿವೆಂಕಟಪ್ಪ, ಎಂ. ವೆಂಕಟೇಶಪ್ಪ, ಜಯಮ್ಮ, ನಾರಾಯಣಮ್ಮ, ವಿನೋದ್​ಕುಮಾರ್, ಅರವಿಂದ್, ಪತೀಶ್, ಮನೋಜ್ ಇತರರು ಉಪಸ್ಥಿತರಿದ್ದರು.

ಮೂವರಿಗೂ ಕಣ್ಣಿಲ್ಲ!: ಕೋಲಾರ ತಾಲೂಕಿನ ಗಿರ್ನಹಳ್ಳಿ ನಿವಾಸಿ ಮುನಿಯಪ್ಪ ಹಾಗೂ ಲಕ್ಷ್ಮಮ್ಮ ದಂಪತಿಗೆ ಮೂವರು ಹೆಣ್ಣುಮಕ್ಕಳು, ಒಬ್ಬ ಮಗ. ಒಟ್ಟು ನಾಲ್ಕು ಮಕ್ಕಳಲ್ಲಿ ಅನಸೂಯಮ್ಮ ಹಿರಿಯ ಪುತ್ರಿ. ವಿಧಿಯಾಟ ಎಂಬಂತೆ ಮೂವರು ಪುತ್ರಿಯರೂ ಹುಟ್ಟು ಅಂಧರು. ದಂಪತಿಗಳು ಕೂಲಿ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದಾರೆ.

ಅಂಗಡಿಯಿಂದ ಜೀವನ: ಬೆಂಗಳೂರಿನ ಜಯನಗರದ ನಿವಾಸಿ ನಾಗರಾಜಪ್ಪ ಮತ್ತು ಜಯಮ್ಮ ದಂಪತಿಗೆ ಪುತ್ರ ಶಿವಕುಮಾರ್ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಶಿವಕುಮಾರ್ ಅಂಧನಾಗಿದ್ದು, ಪಾಲಕರು ಜಯನಗರದಲ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.

Leave a Reply

Your email address will not be published. Required fields are marked *