ಸನ್ಯಾಸಿನಿಯಾದ ಮೈತ್ರೇಯಿ

ಕ್ರಿ.ಪೂ. 800ರ ಸುಮಾರಿನಲ್ಲಿ ರಚಿತವಾದ ವೇದಗಳ ಋಕ್ಕುಗಳಲ್ಲಿ ಮೈತ್ರೇಯಿ ಹೆಸರು ಉಲ್ಲೇಖಿತವಾಗಿದೆ. ಋಷಿ ಯಾಜ್ಞವಲ್ಕ ್ಯ ಇಬ್ಬರು ಪತ್ನಿಯರಲ್ಲಿ ಮೈತ್ರೇಯಿ ಮೊದಲಿನವಳು. ಇನ್ನೊಬ್ಬಳ ಹೆಸರು ಕಾತ್ಯಾಯಿನಿ. ಋಗ್ವೇದದ 10 ಋಕ್ಕುಗಳು ಇವಳಿಂದ ರಚಿತವಾಗಿದೆಯೆಂದು ತಿಳಿದುಬರುತ್ತದೆ. ಪತಿಯ ವಿಚಾರದಲ್ಲಿ ಬಹಳ ಗೌರವವುಳ್ಳವಳು ಈಕೆ. ಸವತಿ ಕಾತ್ಯಾಯಿನಿಯ ಜತೆ ಯಾವುದೇ ಮನಸ್ತಾಪವಿಲ್ಲದೆ ಬದುಕು ಸಾಗಿಸಿದವಳು. ಬ್ರಹ್ಮಜ್ಞಾನಿಯೂ, ತತ್ವಶಾಸ್ತ್ರಜ್ಞಳೂ ಆದ ಮೈತ್ರೇಯಿಯ ಋಕ್ಕುಗಳಲ್ಲಿ ಪತಿಯಾದ ಯಾಜ್ಞವಲ್ಕ ್ಯನ್ನು ಅತಿಶಯವಾಗಿ ಹೊಗಳುವ, ಕೊಂಡಾಡುವ ವಿಚಾರವಿದೆ. ಕಾತ್ಯಾಯಿನಿ ಒಬ್ಬ ಸಾಮಾನ್ಯ ಗೃಹಿಣಿಯಾಗಿ ಬದುಕಿದರೆ ಮೈತ್ರೇಯಿ ವೇದಕಾಲದ ಅತಿ ಶ್ರೇಷ್ಠ ಬ್ರಹ್ಮವಾದಿನಿಯೂ ಮಂತ್ರದ್ರಷ್ಟ್ರಾರಳೂ ಆಗಿ ಪ್ರಸಿದ್ಧಳಾಗಿದ್ದಾಳೆ.

ಮೈತ್ರೇಯಿಯ ಸಾಂಸಾರಿಕ ಬದುಕಿನಲ್ಲಿ ನಡೆದ ಕುತೂಹಲಕರ ಹಾಗೂ ವಿಚಾರಪ್ರದವಾದ ಘಟನೆಯೊಂದು ಹೀಗಿದೆ. ಪತಿ ಯಾಜ್ಞವಲ್ಕ ್ಯ ರು ಸಂಸಾರದಿಂದ ದೂರವಾಗಿ ಸಂಪೂರ್ಣ ಸನ್ಯಾಸತ್ವವನ್ನು ಹೊಂದುವ ನಿಶ್ಚಯ ಮಾಡಿದ ಸಂದರ್ಭ ಅದು. ಸನ್ಯಾಸತ್ವ ಸ್ವೀಕರಿಸುವ ಮುನ್ನ ತಮ್ಮ ಲೌಕಿಕ ಸಂಪತ್ತುಗಳನ್ನು ಇಬ್ಬರು ಮಡದಿಯರಿಗೂ ಹಂಚಿಕೊಡುವ ಯೋಚನೆ ಮಾಡಿದ ಅವರು ಮನಸ್ಸಿನ ಇಂಗಿತವನ್ನು ಮಡದಿಯರಿಗೆ ತಿಳಿಸುತ್ತಾರೆ. ಆಗ ಮೈತ್ರೇಯಿ ಗಂಡನಲ್ಲಿ ಒಂದು ಪ್ರಶ್ನೆ ಕೇಳುತ್ತಾಳೆ, ‘ನೀವು ಕೊಡುವ ಈ ಸಂಪತ್ತು ನನ್ನನ್ನು ಚಿರಂಜೀವಿಯನ್ನಾಗಿ ಮಾಡುತ್ತದೆಯೇ? ಆಗ ಋಷಿ ಉತ್ತರಿಸುತ್ತಾರೆ, ‘ಸಂಪತ್ತು ಯಾವತ್ತೂ ಯಾರನ್ನೂ ಚಿರಂಜೀವಿಯನ್ನಾಗಿ ಮಾಡುವುದಿಲ್ಲ. ಅದರಿಂದ ವ್ಯಕ್ತಿಯ ಶ್ರೀಮಂತಿಕೆ ಮಾತ್ರ ಹೆಚ್ಚುತ್ತದೆ’. ಅದಕ್ಕೆ ಅವಳು ‘ಹಾಗಿದ್ದರೆ ನನಗೆ ಬೇಕಾದುದು ಈ ನಶ್ವರವಾದ ಲೌಕಿಕ ಸಂಪತ್ತಲ್ಲ. ನಾನು ಶಾಶ್ವತವಾದ ಐಶ್ವರ್ಯವನ್ನು ಆಸೆಪಡುತ್ತಿದ್ದೇನೆ. ಅದನ್ನು ದಯಪಾಲಿಸಿ’ ಎಂದು ಕೇಳುತ್ತಾಳೆ.

ಮಡದಿಯ ಮಾತಿನಿಂದ ಸುಪ್ರೀತರಾದ ಋಷಿ ಅವಳನ್ನು ಆಧ್ಯಾತ್ಮದತ್ತ ಕರೆದೊಯ್ಯುತ್ತಾರೆ. ತಮ್ಮ ಜ್ಞಾನದಲ್ಲಿ ಸಹಭಾಗಿತ್ವ ನೀಡಿ ಆಕೆಯನ್ನು ಜ್ಞಾನಲೋಕದಲ್ಲಿ ಅಜರಾಮರಳಾಗುವಂತೆ ಮಾಡುತ್ತಾರೆ. ಹೀಗೆ ಸಾಂಸಾರಿಕ ಭೋಗಭಾಗ್ಯಗಳನ್ನು ತ್ಯಜಿಸಿ ಗಂಡನೊಂದಿಗೆ ಸನ್ಯಾಸತ್ವದ ದೀಕ್ಷೆ ಸ್ವೀಕರಿಸಿದ ಮಹಾಪತಿವ್ರತೆ ಮೈತ್ರೇಯಿ ವಿದ್ಯಾವಂತಳಾಗಿ ವೇದಜ್ಞಾನದ ಉತ್ತುಂಗ ಶಿಖರಕ್ಕೇರಿ ಮಹಾ ಮಹಿಳೆ ಎನಿಸಿಕೊಂಡಳು. ಸಂಸಾರಿಯಾಗಿದ್ದಾಗಲೂ ಗಂಡನೊಂದಿಗೆ ಯಾವುದೇ ಕೋಪತಾಪಗಳಿಲ್ಲದೆ ಸವತಿಯೊಂದಿಗೆ ದಾಂಪತ್ಯ ಜೀವನ ಹಂಚಿಕೊಂಡು ಸಂತೋಷವಾಗಿಯೇ ಇದ್ದಳು. ಹಾಗೆಯೇ, ಅವನೊಂದಿಗೆ ಸನ್ಯಾಸವನ್ನೂ ಸಂತೋಷವಾಗಿಯೇ ಸ್ವೀಕರಿಸಿ ಆದರ್ಶ ಮಹಿಳೆಯರ ಸರಣಿಯಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾಳೆ.