ಹಿರೀಸಾವೆ: ಸದ್ಯದಲ್ಲಿಯೇ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯ ಮತಿಘಟ್ಟ ಗ್ರಾಮದಲ್ಲಿ ಏತನೀರಾವರಿ ಯೋಜನೆಯಡಿ ತುಂಬಿ ಹರಿಯುತ್ತಿರುವ ಕೆರೆಗೆ ಗುರುವಾರ ವಿಶೇಷ ಪೂಜೆಯೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿ, ಮುಂದಿನ ರಾಜಕೀಯ ಬೆಳವಣಿಗೆಯು ರಾಜ್ಯದ ರೈತರ ಹಿತಕ್ಕಾಗಿ ಎಂಬುದು ಮಾತ್ರ ಅಕ್ಷರಶಃ ಸತ್ಯ ಎಂದರು.
ಚನ್ನಪಟ್ಟಣ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಉತ್ತಮ ಜನಸ್ಪಂದನೆ ಕಂಡುಬಂದಿದ್ದು, ಶೇ.100 ರಷ್ಟು ಗೆಲುವು ಖಚಿತವಾಗಿದೆ. ರೈತಪರ ಕಾಳಜಿ ಹೊಂದಿರುವ ಪಕ್ಷದ ಮೇಲೆ ಮತದಾರರು ನಂಬಿಕೆ ಇಟ್ಟಿದ್ದಾರೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇಶ ಹಾಗೂ ರಾಜ್ಯದ ರೈತರ ಹಿತ ಕಾಪಾಡುವ ಸಲುವಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದಾರೆ. ಇನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರೈತರ ಏಳಿಗೆಗಾಗಿ ಸದಾ ಹಗಲಿರುಳು ಶ್ರಮಿಸುತಿದ್ದಾರೆ ಎಂದು ತಿಳಿಸಿದರು.
ಹೋಬಳಿಯ ತೋಟಿಕೆರೆ ಏತನೀರಾವರಿ ಯೋಜನೆಯು ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಕೂಸಾಗಿದ್ದು, ಅದರ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಯೋಜನೆಯಡಿ ಸುಮಾರು 23ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಉದ್ದೇಶವಿದೆ ಎಂದರು.
ಚನ್ನರಾಯಪಟ್ಟಣ ಮತ್ತು ಜನಿವಾರ ಕೆರೆಗಳಿಗೆ ಹೇಮಾವತಿ ನದಿಯಿಂದ ನೇರವಾಗಿ ನೀರು ಹರಿಸುವ ಹಾಗೂ ದಿಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.
ಎರಡನೇ ಹಂತದಲ್ಲಿ ತೋಟಿಕೆರೆ ಏತನೀರಾವರಿ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಈ ಯೋಜನೆಗೆ ಕೃಷಿಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರವನ್ನು ನೀಡಬೇಕಿದೆ. ಮುಂದಿನ ದಿನಗಳಲ್ಲಿ ಕಾಲುವೆ ಬಲವರ್ಧನೆಗೆ ಒತ್ತು ನೀಡಲಾಗುವುದು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಶಾಸಕರು ಮಾಲಾರ್ಪಣೆ ಮಾಡಿದರು. ಶ್ರೀ ಈಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕೆರೆಗೆ ಬಾಗಿನ ಅರ್ಪಿಸಲಾಯಿತು. ಪ್ರಸಾದ ವಿನಿಯೋಗ ನಡೆಯಿತು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಮುಖಂಡರಾದ ದೇವರಾಜೇಗೌಡ, ಪಿ.ಕೆ.ಮಂಜೇಗೌಡ, ಜಿಕೆವಿಕೆ ದೇವರಾಜು, ತೋಟಿ ಜಯರಾಮ್, ಪ್ರಭಾಕರ್, ಗವಿರಂಗೇಗೌಡ, ಶ್ರೀಕಂಠೇಗೌಡ, ರಾಜಣ್ಣ, ರಾಜಗೋಪಾಲ್, ರಾಜೇಶ್, ನಟರಾಜ್, ಗ್ರಾಮ ಪಂಚಾಯಿತಿ ಮತ್ತು ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಭಾಗವಹಿಸಿದ್ದರು.