ಸದ್ಧರ್ಮದಿಂದ ಬಾಳುವವನೇ ದೇವರು

ಹುಬ್ಬಳ್ಳಿ: ‘ಯಾವುದೇ ಧರ್ಮ ಹಿಂಸೆ, ವಂಚನೆಗೆ ಆಸ್ಪದ ನೀಡಿಲ್ಲ. ಎಲ್ಲ ಧರ್ಮಗಳೂ ಮಾನವೀಯತೆ, ಸಹಿಷ್ಣುತೆ, ಸಹಬಾಳ್ವೆಯ ತತ್ವವನ್ನೇ ಹೇಳಿವೆ. ಇದನ್ನು ಅರಿತು ಜೀವನ ನಡೆಸುವವನೇ ದೇವರು. ದೇವರು ಬೇರೆಲ್ಲೂ ಇಲ್ಲ, ನಮ್ಮಲ್ಲೇ ಇದ್ದಾನೆ. ಸದ್ಧರ್ಮದಿಂದ ಬಾಳಿದವನು ದೇವರಾಗುತ್ತಾನೆ. ದಾರಿ ಬಿಟ್ಟವನು ರಾಕ್ಷಸನಾಗುತ್ತಾನೆ…

ಆಚಾರ್ಯ ಶ್ರೀ ವಿಜಯರಾಜತಿಲಕ ಸುರೀಶ್ವರ ಮಹಾರಾಜ ಅವರು ಹೇಳಿದ ಮಾತಿದು.

ಕುಂಚಿಯಲ್ಲಿ ಚಾತುರ್ವಸ್ಯ ವ್ರತ ಪೂರ್ಣಗೊಳಿಸಿ ಗುಜರಾತಿನ ಭಾವನಗರಕ್ಕೆ ಪ್ರವಾಸ ಬೆಳೆಸಿರುವ ಆಚಾರ್ಯ ಶ್ರೀಗಳು, ಹುಬ್ಬಳ್ಳಿಯಲ್ಲಿ ‘ವಿಜಯವಾಣಿ’ಯೊಂದಿಗೆ ಮಾತನಾಡಿ ವ್ಯಕ್ತಿ ಹೇಗೆ ಬಾಳಬೇಕು ಹಾಗೂ ಎಂತಹ ವ್ಯಕ್ತಿತ್ವ ಅಳವಡಿಸಿಕೊಳ್ಳಬೇಕೆಂಬುದರ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ವ್ಯಕ್ತಿಗೆ ಸನ್ನಡತೆ, ವಿನಯ ಮುಖ್ಯ. ಈ ಗುಣ ಸಿಗುವುದು ಪಾಲಕರಿಂದ. ಪಾಲಕರೇ ದುಶ್ಚಟಗಳ ದಾಸರಾದಾಗ ಮಕ್ಕಳಿಗಾದರೂ ಹೇಗೆ ಬುದ್ಧಿಮಾತು ಹೇಳಿಯಾರು? ಎಂದು ಕಳವಳ ವ್ಯಕ್ತಪಡಿಸಿದ ಆಚಾರ್ಯ ಶ್ರೀಗಳ ಸಂಪೂರ್ಣ ಸಂದರ್ಶನದ ವಿವರ ಹೀಗಿದೆ :
‘ಬದುಕು, ಬದಕಲು ಬಿಡು’ ಎಂಬ ತತ್ವವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಎಲ್ಲರೂ ಶಾಂತಿ, ನೆಮ್ಮದಿ, ಸಹಿಷ್ಣುತೆಯಿಂದ ಬಾಳಲು ಸಾಧ್ಯ. ಯಾವುದೇ ಪ್ರಾಣಿ, ಪಕ್ಷಿ ಸೇರಿದಂತೆ ಸಣ್ಣ ಜೀವಿಯನ್ನೂ ಹಿಂಸಿಸುವ ಹಕ್ಕು ಮನುಷ್ಯನಿಗೆ ಇಲ್ಲ.

ಹಣ ಗಳಿಸುವುದೇ ಮುನುಷ್ಯನ ಪ್ರಮುಖ ಗುರಿಯಾಗಿಬಿಟ್ಟಿದೆ. ಆದರೆ ಗಳಿಸಿದ ಹಣದ ಮೂಲಕ ಬರುವ ಲಕ್ಷ್ಮೀ ಎರಡು ರೂಪದಲ್ಲಿರುತ್ತಾಳೆ. ಹಣದಿಂದ ಸತ್ಕಾರ್ಯಗಳನ್ನು ಮಾಡಿದರೆ ಲಕ್ಷ್ಮೀ ಆತನ ಬಳಿ ಉಳಿಯುತ್ತಾಳೆ. ಆದರೆ ಹಣ ಗಳಿಕೆಯಲ್ಲಿ ಅಂಧನಾಗಿ ತಾನೇ ದೊಡ್ಡವನೆಂಬಂತೆ ಪಾಪಗಳನ್ನು ಮಾಡುತ್ತ ಹೋದರೆ ಹತ್ತು ವರ್ಷಗಳ ನಂತರ ಲಕ್ಷ್ಮೀ ಹೊರಟು ಹೋಗುತ್ತಾಳೆ. ಆಗ ಪಾಪ ಮಾಡಿದ ವ್ಯಕ್ತಿ ಕೊರಗುತ್ತ ಕೂರಬೇಕಾಗುತ್ತದೆ. ಹಣ ಇದ್ದಾಗ ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಬೇಕು.

ಜೈನ ಧರ್ಮದ ತತ್ವ ‘ಅಹಿಂಸಾ ಪರಮೋಧರ್ಮ’. ಜೀವನದುದ್ದಕ್ಕೂ ಅಂಹಿಸೆ ಪಾಲಿಸಬೇಕು. ಈ ತತ್ವ ಜೈನ ಧರ್ಮದಲ್ಲಷ್ಟೇ ಇಲ್ಲ. ಎಲ್ಲ ಧರ್ಮದಲ್ಲಿಯೂ ಇದೆ. ಆಯಾ ಧರ್ಮದವರು ತಮ್ಮ ಧರ್ಮದಲ್ಲಿರುವ ತತ್ವಗಳನ್ನು ಅರಿತು ಬಾಳಬೇಕು.

ನಾವು ಯಾವ ರೀತಿ ಬಾಳಬೇಕೆಂಬುದನ್ನು ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಿಗೆ ಸರಿಯಾಗಿ ತಿಳಿಸಿಕೊಡಬೇಕು. ಹಿಂಸೆಯ ಮಾರ್ಗದಲ್ಲಿರುವವರು ಇನ್ನಾದರೂ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡಬೇಕು. ಇಲ್ಲದಿದ್ದರೆ ಮಾಡಿದ ತಪ್ಪಿಗೆ ಅವರೂ ಕಷ್ಟ ಅನುಭವಿಸಿ, ಸುತ್ತಲಿರುವವರನ್ನೂ ಕಷ್ಟಕ್ಕೆ ದೂಡುತ್ತಾರೆ.

ಆಚಾರ್ಯ ಶ್ರೀ ವಿಜಯರಾಜತಿಲಕ ಸುರೀಶ್ವರ ಮಹಾರಾಜರ ದೀಕ್ಷಾಪೂರ್ವದ ಹೆಸರು ಸಾಹೇಬಣ್ಣ. ಇವರ ತಂದೆ ಹನುಮಂತಪ್ಪ, ತಾಯಿ ತಿಮ್ಮವ್ವ. ರಾಯಚೂರ ಜಿಲ್ಲೆ ಕುಣಸಿಯಲ್ಲಿ ಜನಸಿದ್ದ ಶ್ರೀಗಳಿಗೆ ಇದೀಗ 97 ವರ್ಷ.

ಈ ಹಿಂದೆ ಹುಬ್ಬಳ್ಳಿಯ ಮರಾಠಾ ಗಲ್ಲಿಯ ಶಂಕರಲಾಲ ಜಿತೂರಿ ಎಂಬುವವರ ಶ್ರೀನಿವಾಸ ಕ್ಲಾಥ್ ಸ್ಟೋರ್​ನಲ್ಲಿ ಕೆಲಸ ಮಾಡಿದ್ದರು. ಇದೀಗ ಸುಮಾರು 70 ವರ್ಷಗಳ ನಂತರ ಮತ್ತೆ ಹುಬ್ಬಳ್ಳಿಗೆ ಬಂದಿದ್ದಾರೆ. ಅವರ ಬೋಧನೆಯಿಂದ 8 ಸಾವಿರಕ್ಕೂ ಹೆಚ್ಚು ಜನರು ಮಾಂಸಾಹಾರ ತ್ಯಜಿಸಿದ್ದಾರೆ. 80ಕ್ಕೂ ಹೆಚ್ಚು ಜನರಿಗೆ ಸನ್ಯಾಸ ದೀಕ್ಷೆ ನೀಡಿದ್ದಾರೆ.

ಜೈನ ಧರ್ಮದ ತತ್ವಗಳಿಗೆ ಮನಸೋತು ಆಂಧ್ರದ ಅಮರಾವತಿಯಲ್ಲಿ ತಮ್ಮ 50ನೇ ವರ್ಷದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಜಪಾನ್, ಫ್ರೆಂಚ್ ಸೇರಿದಂತೆ ಸುಮಾರು 18 ಭಾಷೆಗಳನ್ನು ಬಲ್ಲರು. ಕನ್ನಡ, ತೆಲಗು, ಮರಾಠಿ, ಇಂಗ್ಲಿಷ್, ಹಿಂದಿ, ಜರ್ಮನ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಲವಾರು ಕೃತಿ ರಚಿಸಿರುವ ಇವರು ಓದಿದ್ದು 3ನೇ ತರಗತಿಯವರೆಗೆ ಮಾತ್ರ!