ಭಾಲ್ಕಿ: ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆಗಳಿಗೂ ಮಹತ್ವ ಕೊಡಬೇಕು. ನಮ್ಮ ಸದೃಢ ದೇಹಕ್ಕೆ ಕ್ರೀಡೆಗಳು ಅತ್ಯವಶ್ಯಕವಾಗಿವೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ್ ಹೇಳಿದರು.
ಕಲವಾಡಿ ಗ್ರಾಮದ ಮಹಾತ್ಮಗಾಂಧಿ ಪ್ರೌಢಶಾಲೆಯಲ್ಲಿ, ಸಮಾಜ ಕಲಾಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ನಿಲಯಾರ್ಥಿಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನಸಿಕವಾಗಿ ನೆಮ್ಮದಿಯಿಂದ ಇರಬೇಕಾದರೆ ದೈಹಿಕ ಆರೋಗ್ಯಮುಖ್ಯ, ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತಾತ್ರಿ ಕಾಟಕರ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಸೋಲು-ಗೆಲುವು ಸಹಜ. ಆದರೆ ಭಾಗವಹಿಸುವಿಕೆ ಮುಖ್ಯಎಂದರು.
ಸಂಸ್ಥೆ ಅಧ್ಯಕ್ಷೆ ಮೋಜಾಬಾಯಿ ಕಲವಾಡಿಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಪಂ ಇಒ ಕಚೇರಿಯ ವಿನೋದ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಮಮ್ತಾಜ್ ಬೇಗಂ ಪ್ರಾಸ್ತಾವಿಕ ಮಾತನಾಡಿದರು.
ಮುಖ್ಯಶಿಕ್ಷಕ ಕಿರಣಕುಮಾರ ಭಾಟಸಾಂಗವಿ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ನಿದೇರ್ಶಕ ದಿಲೀಪಕುಮಾರ ಬಿರಾದಾರ, ಸಿಆರ್‌ಪಿ ಸಂತೋಷ ಧಬಾಲೆ, ಸಮಾಜ ಕಲ್ಯಾಣ ಇಲಾಖೆಯ ಧನರಾಜ ಬಂಬುಳಗೆ, ನಿಲಯ ಪಾಲಕ ಧನರಾಜ ಮೇತ್ರೆ, ಆನಂದ ಖಂಡಗೊಂಡ, ಪ್ರವೀಣ ಸಿಂಧೆ, ಪ್ರದೀಪ ಜೋಳದಪಕೆ, ದೈಹಿಕ ಶಿಕ್ಷಕ ಹಣಮಂತ ಕಾರಾಮುಂಗೆ, ವಿಜಯಕುಮಾರ ಬಾಜೋಳಗಾ, ಶೋಭಾ ಮಾಸಿಮಾಡೆ, ಆರತಿ ಥಮಕೆ ಇತರರಿದ್ದರು.
ಅಂಬಿಕಾ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಕಿರಣಕುಮಾರ ಸ್ವಾಗತಿಸಿದರು. ಹಣಮಂತ ಕಾರಾಮುಂಗೆ ನಿರೂಪಣೆ ಮಾಡಿದರು. ಧನರಾಜ ಮೇತ್ರೆ ವಂದಿಸಿದರು.