ಸದೃಢ ದೇಶಕ್ಕಾಗಿ ಹಕ್ಕು ಚಲಾಯಿಸಿ

ನೆಲಮಂಗಲ: ಜಿಲ್ಲಾ ಪಂಚಾಯಿತಿ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಶನಿವಾರ ಪಟ್ಟಣದಲ್ಲಿ ಮತದಾನ ಮಹತ್ವ ಕುರಿತ ಜಾಗೃತಿ ಜಾಥಾ ಏರ್ಪಡಿಸಿತ್ತು.

ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ತಾಲೂಕಿನ ಸಹಸ್ರ ಸಂಖ್ಯೆ ಮಹಿಳೆಯರು ಮುಖ್ಯರಸ್ತೆಯಲ್ಲಿ ಬಿತ್ತಿಪತ್ರಗಳ ಹಿಡಿದು ಸದೃಢದೇಶಕ್ಕಾಗಿ ಮಾಡುವ ಮಹಾದಾನ ಎಂಬ ಘೊಷಣೆ ಕೂಗುವ ಮೂಲಕ ಅಂಬೇಡ್ಕರ್ ಕ್ರೀಡಾಂಗಣದವರೆಗೆ ಜಾಥಾ ನಡೆಸಿ ಜನಸಾಮಾನ್ಯರಲ್ಲಿ ಮತದಾನದ ಮಹತ್ವದ ಅರಿವು ಮೂಡಿಸಿದರು.

ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮತದಾನ ಮಹತ್ವದ ಪ್ರತಿಜ್ಞಾವಿಧಿ ಸ್ವೀಕಾರ ಹಾಗೂ ಸಹಿ ಅಭಿಯಾನ ಕಾರ್ಯಕ್ರಮಕ್ಕೆ ಜಿಪಂ ಮುಖ್ಯಲೆಕ್ಕಾಧಿಕಾರಿ ಟಿ.ಆರ್.ಶೋಭಾ ಚಾಲನೆ ನೀಡಿ ಮಾತನಾಡಿದರು.

ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಜವಾಬ್ದಾರಿ. ಮತದಾನದ ಮಹತ್ವವನ್ನು ಮಹಿಳೆಯರಿಗೆ ಮತ್ತು ಜನಸಾಮಾನ್ಯರಿಗೆ ತಿಳಿಸಿಕೊಡುವ ಉದ್ದೇಶದಿಂದ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕೆಲ ಚುನಾವಣೆ ಮತದಾನ ಸಮೀಕ್ಷೆ ಪ್ರಕಾರ ಮಹಿಳೆಯರು ಮತದಾನ ಮಾಡಿರುವುದು ಕಡಿಮೆಯಾಗಿದೆ. 5 ವರ್ಷಕೊಮ್ಮೆ ಅರ್ಹ ಜನಪ್ರತಿನಿಧಿಗಳನ್ನು ಆಯ್ಕೆಮಾಡಿಕೊಳ್ಳುವ ಮತದಾನದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಹಾಯಕ ಚುನಾವಣಾಧಿಕಾರಿ ಶಾಂತಾ ಎಲ್.ಹುಲಿಮನಿ ಮತದಾನ ಮಹತ್ವ ಕುರಿತ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಪ್ರತಿಯೊಬ್ಬರೂ ಮತದಾನ ಮಾಡಬೇಕು. ಮತದಾನ ಮಾಡುವ ಜತೆಗೆ ಸ್ನೇಹಿತರು ಸಂಬಂಧಿಕರು ಸೇರಿ ನೆರೆಹೊರೆಯವರು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು.

ಮಹಿಳೆಯರು ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವ ರಾಷ್ಟ್ರದ ಘನತೆಯನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡಿದರು. ಬಳಿಕ ಸಹಿ ಅಭಿಯಾನದ ಪ್ರಯುಕ್ತ ಬೃಹದಾಕಾರದ ಪೋಸ್ಟರ್​ನಲ್ಲಿ ಸಹಿ ಮಾಡಿ ಮತದಾನದ ಜಾಗೃತಿ ಮೂಡಿಸಲಾಯಿತು. ಕಂದಾಯ ಇಲಾಖೆ ಅಧಿಕಾರಿಗಳು ಮತಯಂತ್ರದಲ್ಲಿ ಮತದಾನ ಮಾಡುವುದು ಮತ್ತು ಮಾಡಿದ ಮತದ ಖಾತ್ರಿ ಮಾಡಿಕೊಳ್ಳುವ ಕುರಿತು ಅರಿವು ಮೂಡಿಸಿದರು.

ತಹಸೀಲ್ದಾರ್ ಕೆ.ಎನ್.ರಾಜಶೇಖರ್, ತಾಪಂ ಇಒ ಗೋವಿಂದರಾಜು, ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣ್, ಸಂಜೀವಿನಿ ಯೋಜನೆ ಮೇಲ್ವಿಚಾರಕಿ ಪದ್ಮಾ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರಕಾಶ್, ಎಸ್​ಐ ಮಂಜುನಾಥ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಗ್ರಾಮಲೆಕ್ಕಿಗ ರವಿಕುಮಾರ್, ನಾಗೇಶ್, ಮಾರುತಿ, ಸಿಬ್ಬಂದಿ ಮೂರ್ತಿ ಇದ್ದರು.

 

Leave a Reply

Your email address will not be published. Required fields are marked *