ಹಳಿಯಾಳ: ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರು ಹಾಗೂ ಸದಸ್ಯರು ತಮ್ಮ ಆಡಳಿತಾವಧಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಿರಿ. ಅಧಿಕಾರಾವಧಿ ಮುಗಿಯಿತು ಎಂದು ಸುಮ್ಮನೆ ಕುಳಿತುಕೊಳ್ಳದೇ ಜನ ಸೇವೆಯಲ್ಲಿ ಕ್ರಿಯಾಶೀಲರಾಗಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಇಲ್ಲಿಯ ಮಿನಿವಿಧಾನಸೌಧದಲ್ಲಿ ಸೋಮವಾರ ಆಯೋಜಿಸಿದ ಆನ್ಲೈನ್ ಸಂವಾದದಲ್ಲಿ ತಾಲೂಕಿನ 24 ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷ ಮತ್ತು ಪಿಡಿಒ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಸಮಯ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.
ಗ್ರಾಮಾಂತರ ಭಾಗದ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಶಾಸಕರು, ಗ್ರಾಮಾಂತರ ಭಾಗದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ತೇರಗಾಂವ, ಭಾಗವತಿ, ಮಂಗಳವಾಡ, ಮದಗನಳ್ಳಿ, ಅರ್ಲವಾಡ, ಸಾಂಬ್ರಾಣಿ, ತಟ್ಟಿಗೆರೆ, ಜನಗಾ, ಆಲೂರ, ಬಿ.ಕೆ. ಹಳ್ಳಿ, ಗುಂಡೊಳ್ಳಿ ಮೊದಲಾದ ಗ್ರಾ.ಪಂ ವ್ಯಾಪ್ತಿಯಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ, ನೀರಿನ ಕರ ಆಕರಣೆ, ಕೊಳವೆಬಾವಿ ದುರಸ್ತಿ ಇತ್ಯಾದಿ ಸಮಸ್ಯೆಯನ್ನು ಪ್ರಸ್ತಾಪಿಸಿ ಪರಿಹಾರ ಮಾಗೋಪಾಯ ಸೂಚಿಸುವಂತೆ ಗ್ರಾ.ಪಂ. ಅಧ್ಯಕ್ಷರು ಮನವಿ ಮಾಡಿದರು. ನಂದಿಗದ್ದಾ, ವಾಟ್ನಾಳ, ಹಂಪಿಹೋಳಿ, ಮುರ್ಕವಾಡ, ಮುಂಡವಾಡ ಭಾಗದಲ್ಲಿ ರಸ್ತೆ ದುರಸ್ತಿ ಬಗ್ಗೆ ಸದಸ್ಯರು ರ್ಚಚಿಸಿದರು.
ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ ತೇರಗಾಂವ ಮತ್ತು 114 ಗ್ರಾಮಗಳಿಗೆ ಕಾಳಿ ನದಿಯಿಂದ ನೀರು ಪೂರೈಕೆ ಯೋಜನೆಗೆ 116 ಕೋ.ರೂ. ಟಿ ಮಂಜೂರಾಗಿದೆ. ದುಡಿಯುವ ಕೈಗಳಿಗೆ ನರೇಗಾ ಯೋಜನೆಯಡಿ ಕೆಲಸ ನೀಡಲು ಸೂಚಿಸಲಾಗಿದೆ ಎಂದು ಶಾಸಕ ದೇಶಪಾಂಡೆ ತಿಳಿಸಿದರು.
ಕೆ.ಕೆ. ಹಳ್ಳಿಯಿಂದ ನಾಗಶೆಟ್ಟಿಕೊಪ್ಪವರೆಗೆ ರಸ್ತೆ ಡಾಂಬರೀಕರಣಕ್ಕೆ 1.5 ಕೋ.ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮುರ್ಕವಾಡ ಕೆರೆಯ ಬಳಿ ರಸ್ತೆ ದುರಸ್ತಿಗೆ 10 ಲಕ್ಷ ರೂ. ಮಂಜೂರಾಗಿದ್ದು, ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ. ತೇರಗಾಂವ- ಕೆಸರೊಳ್ಳಿ ರಸ್ತೆ ಸುಧಾರಣೆಗೆ ಆದೇಶಿಸಿದ್ದೇನೆ ಎಂದರು.
ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ, ಲಕ್ಷ್ಮೀ ಕೊರ್ವೆಕರ, ಮಹೇಶ್ವರಿ ಮಿಶಾಳೆ, ತಾ.ಪಂ. ಸದಸ್ಯ ದೇಮಾಣಿ ಶಿರೋಜಿ, ಸುಭಾಸ್ ಕೊರ್ವೆಕರ, ಹಳಿಯಾಳ ಇಒ ಪ್ರವೀಣಕುಮಾರ ಸಾಲಿ, ದಾಂಡೇಲಿ ಇಒ ಪರಶುರಾಮ ಗಸ್ತಿ, ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಇದ್ದರು.