ಹೊನ್ನಾಳಿ: ರಾಜ್ಯಪಾಲರೇ.. ಕರ್ನಾಟಕ ಬಿಟ್ಟು ತೊಲಗಿ ಎಂಬ ಎಚ್ಚರಿಕೆ ಸಂದೇಶ ಇಟ್ಟುಕೊಂಡು ಆ. 23ರಂದು ಬೆಳಗ್ಗೆ 11 ಗಂಟೆಗೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕು ಅಹಿಂದ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಆದ್ದರಿಂದ ಅವಳಿ ತಾಲೂಕಿನ ಎಲ್ಲ್ಲ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲೋಣ ಎಂದು ಅವಳಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ನೆಲಹೊನ್ನೆ ಮೋಹನ್ ಹಾಗೂ ದಲಿತ ಮುಖಂಡ ದಿಡಗೂರು ತಮ್ಮಣ್ಣ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಿದ್ದು, ಪ್ರಜಾಪ್ರಭುತ್ವ ಮಾದರಿ ಸರ್ಕಾರ ಕೆಡವಲು ಸಂಚು ಹೂಡಿದ್ದಾರೆ ಎಂದರು.
ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಾನಂದ್ ಮಾತನಾಡಿ, ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ, ನಮಗೆ ಅಧಿಕಾರ ಸಿಗುವುದಿಲ್ಲ ಎನ್ನುವ ಭಯದಿಂದ ಬಿಜೆಪಿ, ಜೆಡಿಎಸ್‌ನವರು ಈ ಕುತಂತ್ರ ನಡೆಸಿದ್ದಾರೆ ಎಂದು ದೂರಿದರು.
ತಾಲೂಕು ಮೈನಾರಿಟಿ ಕಮಿಟಿ ಅಧ್ಯಕ್ಷ ಚೀಲೂರು ವಾಜೀದ್ ಮಾತನಾಡಿ, ಸಿದ್ದರಾಮಯ್ಯ ಈ ದೇಶದ ಆಸ್ತಿ, ಅವರನ್ನು ಸಿಎಂ ಗಾದಿಯಲ್ಲಿ ಉಳಿಸಿಕೊಳ್ಳಲು ನಾವೆಲ್ಲರೂ ತೀರ್ಮಾನಿಸಿದ್ದು, ಅದಕ್ಕಾಗಿ ಹೋರಾಟದ ಕರೆ ನೀಡಿದ್ದೇವೆ ಎಂದರು.
ಕೆಪಿಸಿಸಿ ಯುವ ವಕ್ತಾರ ದರ್ಶನ್ ಬಳ್ಳೇಶ್ವರ್ ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ಯಾವುದೇ ತನಿಖಾ ಸಂಸ್ಥೆ ವರದಿ ನೀಡಿಲ್ಲ. ಆದರೂ ರಾಜ್ಯಪಾಲರು ಸಾಂವಿಧಾನಿಕ ಹುದ್ದೆ ದುರ್ಬಳಕೆ ಮಾಡಿಕೊಂಡು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಣಜಾರ್ ಸಮಾಜದ ಮುಖಂಡ ವಸಂತನಾಯ್ಕ, ಛಲವಾದಿ ಸಮಾಜದ ಕುರುವ ಮಂಜುನಾಥ್, ರುದ್ರೇಶ್ ಕೊಡತಾಳ್, ಕುರುಬ ಸಮಾಜದ ಖಜಾಂಚಿ ಎಚ್.ಎ. ನರಸಿಂಹಪ್ಪ, ಕೆ. ಪುಟ್ಟಪ್ಪ, ಎಚ್.ಡಿ. ವಿಜೇಂದ್ರಪ್ಪ, ಕುಂಬಳೂರು ವಾಗೀಶ್, ಕೃಷ್ಣಪ್ಪ ಇದ್ದರು.