ಸತ್ವದ ನಿರಂತರ ಝುರಿ

ದೇವರು ಪ್ರತಿಕ್ಷಣವೂ ನಮ್ಮ ಬಳಿಯೇ ಬರುತ್ತಿದ್ದಾನೆ. ಬರುತ್ತಿದ್ದಾನೆ ಎಂದರೂ ಅದು ತಪ್ಪಾಗುತ್ತದೆ. ಪರಮಾತ್ಮ ನಮ್ಮ ಬಳಿಯೇ ಇದ್ದಾನೆ. ಪರಮಾತ್ಮ ಭವಿಷ್ಯವಲ್ಲ, ಅವನು ವರ್ತಮಾನ. ಗಾಳಿಯು ಬೀಸಿತೆಂದರೆ ಅವನೇ ಬರುವುದು ಗಾಳಿಯ ರೂಪದಲ್ಲಿ. ಅವನನ್ನು ಬಿಟ್ಟು ಇಲ್ಲಿ ಬೇರೇನೂ ಇಲ್ಲ. ಅವನು ನಮ್ಮ ಜೊತೆಗೇ ಇದ್ದರೂ ಎಲ್ಲೋ ಇರುವನೆಂದು ತಿಳಿದು ಕರೆಯುತ್ತೇವೆ, ಅವನು ಬಾಗಿಲ ಬಳಿಯೇ ನಿಂತಿದ್ದರೂ ಎಲ್ಲೋ ಹೊರಗೆ ಹುಡುಕುತ್ತೇವೆ, ಅವನು ಅತ್ಯಂತ ಹತ್ತಿರದಲ್ಲಿರುವನು. ಆದರೆ ಸೂರ್ಯ ಚಂದ್ರರಾಚೆ ಹುಡುಕುತ್ತಿದ್ದೇವೆ.

ಮನುಷ್ಯ ಯಾವಾಗಲೂ ಪರಮಾತ್ಮನಿಂದ ವಂಚಿತನಾಗುತ್ತಾನೆ. ಕಾರಣ ಅವನು ದೂರದಲ್ಲಿದ್ದಾನೆ, ಎಲ್ಲೋ ಬಚ್ಚಿಟ್ಟುಕೊಂಡಿದ್ದಾನೆ ಎಂದಲ್ಲ. ಅವನು ಸರ್ವವ್ಯಾಪಿ. ಆದರೂ ನಮಗೆ ಕಾಣುವುದಿಲ್ಲ. ನಮಗೆ ಅವನನ್ನು ಗುರುತಿಸಲಾಗುತ್ತಿಲ್ಲ. ಮೀನು ಸಮುದ್ರದಲ್ಲಿಯೇ ಜನಿಸಿದರೂ, ಅಲ್ಲಿಯೇ ಬೆಳೆದು ಜೀವನವನ್ನೆಲ್ಲ ಅಲ್ಲಿಯೇ ಕಳೆದರೂ ಸಮುದ್ರದ ಪರಿಚಯ ಅದಕ್ಕಿರುವುದಿಲ್ಲ. ಅದು ಸಮುದ್ರವನ್ನು ಹುಡುಕುತ್ತಲೇ ಇರುತ್ತದೆ. ಯಾವಾಗ ಮೀನುಗಾರ ಸಮುದ್ರದಿಂದ ಆಚೆ, ಮರಳಿನ ಮೇಲೆ ಬೀಸಾಡುತ್ತಾನೋ ಆಗ ಸಮುದ್ರದ ಇರುವಿಕೆ ಅದರ ಅನುಭವಕ್ಕೆ ಬರುತ್ತದೆ. ಆದರೆ ಮನುಷ್ಯ ಪರಮಾತ್ಮನಿಂದ ಬೇರೆಯಾಗಲು ಸಾಧ್ಯವಿಲ್ಲ. ಕಾರಣ ಸಮುದ್ರಕ್ಕೆ ಇರುವ ದಡದಂತೆ ಯಾವ ತಟವೂ ಇಲ್ಲಿಲ್ಲ. ಇಲ್ಲಿ ಕಾಣುವ, ಕೇಳುವ ಅನುಭವಿಸುವ ಪ್ರತಿಯೊಂದೂ ಪರಮಾತ್ಮನೇ. ಇದೇ ನಮ್ಮ ಬಹು ದೊಡ್ಡ ಸಮಸ್ಯೆ.

ಮೀನಿನಂತೆ ನಾವೂ ಪರಮಾತ್ಮನಿಂದ ಭಿನ್ನವಾಗಲು ಸಾಧ್ಯವಿದ್ದಲ್ಲಿ ತತ್​ಕ್ಷಣವೇ ಅವನನ್ನು ಸೇರಲು ಹಂಬಲಿಸುತ್ತಿದ್ದೆವು. ಆದರೆ ಅದು ಹಾಗಿಲ್ಲ. ನಾವು ಅವನನ್ನು ಬಿಟ್ಟಿಲ್ಲ. ನಾವು ಅವನ ಉಸಿರಾಗಿದ್ದೇವೆ, ಅವನ ತರಂಗಗಳಾಗಿದ್ದೇವೆ. ಆದ್ದರಿಂದ ಪರಮಾತ್ಮ ಬರುವುದು ಯಾವಾಗ ಎಂಬ ಪ್ರಾರ್ಥನೆಯನ್ನು ಮಾಡುವುದಲ್ಲ. ಪರಮಾತ್ಮನನ್ನು ಹುಡುಕುವ ದಿಕ್ಕನ್ನು ಬದಲಾಯಿಸಬೇಕಾಗಿದೆ. ಪರಮಾತ್ಮ ನಮ್ಮೆದುರೇ ಇದ್ದರೂ ಕಾಣುತ್ತಿಲ್ಲವೆಂದಾದರೆ ನಮ್ಮಲ್ಲೇ ಏನೋ ದೋಷವಿರಬೇಕು. ನಾವೇ ಕಣ್ಣುಮುಚ್ಚಿ ಕುಳಿತಿದ್ದೇವೆ. ಅಂತಮುಖಿಯಾಗಬೇಕಾಗಿದೆ, ಅಧ್ಯಾತ್ಮದ ಕಡೆ ಮುಖ ತಿರುಗಿಸಬೇಕಾಗಿದೆ.