ಸತ್ಯ-ಶುದ್ಧ ಭಕ್ತಿ ಮಾರ್ಗ ತೋರಿದ ಶರಣರು

ಗದಗ:ಬಸವಾದಿ ಶರಣರು ದೇವರನ್ನು ತಲುಪುವ ಸತ್ಯ-ಶುದ್ಧ ಭಕ್ತಿಯ ಮಾರ್ಗವನ್ನು ತೋರಿಸಿದ್ದಾರೆ. ಮಾನವ ಜನ್ಮವು ಶ್ರೇಷ್ಠವಾಗಿದ್ದು, ಅದನ್ನು ಕೇವಲ ಭೌತಿಕ ಸಿರಿಸಂಪತ್ತು ಗಳಿಸಲು ಮೀಸಲಾಗಿರಿಸದೆ ಆಧ್ಯಾತ್ಮಿಕ ಜ್ಞಾನ ಪಡೆದು ಸಾರ್ಥಕಪಡಿಸಬೇಕು ಎಂದು ಬೀದರ ಚಿದಂಬರಾಶ್ರಮದ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.

ನಗರದ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬದುಕಿನುದ್ದಕ್ಕೂ ಶರಣ ಸಂಸ್ಕೃತಿಯ ಪ್ರಸಾರಕ್ಕಾಗಿ ಶ್ರಮಿಸಿದ ಲಿಂಗೈಕ್ಯ ಡಾ. ಸಿದ್ಧಲಿಂಗ ಶ್ರೀಗಳ ಬದುಕು ಎಲ್ಲ ಸ್ವಾಮೀಜಿಗಳಿಗೆ ಅನುಕರಣೀಯವಾಗಿದೆ ಎಂದರು. ಬಸವಬೆಳವಿಯ ಶರಣಬಸವ ದೇವರು ಸಮ್ಮುಖ ವಹಿಸಿ, ಶ್ರೀಮಠದ ಮೂಲ ಪುರುಷರಾದ ತೋಂಟದ ಸಿದ್ಧಲಿಂಗೇಶ್ವರರ ಪ್ರತಿರೂಪವಾಗಿದ್ದ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಕಾವಿ ಬಟ್ಟೆಯ ಮಹತ್ವವನ್ನು ಹೆಚ್ಚಿಸಿದ ಸಂತರು ಎಂದರು.

ಗೋಕಾಕ ಶೂನ್ಯ ಸಂಪಾದನಾ ಪೀಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ವರ್ಷದ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹಾಗೂ ಬೆಲ್ಲದಬಾಗೇವಾಡಿಯ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಶಿರೋಳ-ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಆಲಮೇಲದ ಜಗದೇವ ಮಲ್ಲಿಬೊಮ್ಮ ಸ್ವಾಮೀಜಿ, ಇತರರು ಉಪಸ್ಥಿತರಿದ್ದರು. ಬಾನಂದೂರು ಕೆಂಪಯ್ಯ ಸಂಗಡಿಗರಿಂದ ತತ್ವಪದಗಳ ಗಾಯನ ಕಾರ್ಯಕ್ರಮ ಜರುಗಿತು. ಜಾತ್ರಾ ಸಮಿತಿ ಅಧ್ಯಕ್ಷ ಡಾ. ಎಂ.ಬಿ. ನಿಂಬಣ್ಣವರ ಸ್ವಾಗತಿಸಿದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.