ಸತ್ಯ, ಪುಣ್ಯ ಕಾರ್ಯಗಳಿಂದ ಸುಖದ ಫಲ

ಗದಗ: ಸತ್ಯ, ಪುಣ್ಯ ಕಾರ್ಯಗಳನ್ನು ಮಾಡಿ ಸುಖದ ಫಲಗಳನ್ನು ಅನುಭವಿ ಸಬೇಕು ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದ ಮುಕ್ಕಣ್ಣೇಶ್ವರ ಮಠದಲ್ಲಿ ಸದ್ಗುರು ಮುಕ್ಕಣ್ಣೇಶ್ವರ ಸ್ವಾಮೀಜಿ 94ನೇ ಪುಣ್ಯಾರಾಧನೆ ಹಾಗೂ ಕಳಸಾರೋಹಣದ ಧಾರ್ವಿುಕ ಸಭೆಯಲ್ಲಿ ಅವರು ಮಾತನಾಡಿದರು.

ಪಾಪ ಕರ್ಮಗಳನ್ನು ಮಾಡಬಾರದು ಎಂದು ವಿಚಾರವಂತರಿಗೆ ಅರಿವಿರಬೇಕು. ಅಂತಹ ಕಾರ್ಯಗಳಿಂದಾಗುವ ಪರಿಣಾಮಗಳ ಕುರಿತು ವಿವೇಚನೆ ಹೊಂದಿರಬೇಕು. ಸತ್ಯದ ನುಡಿಗಳು ಸ್ವರ್ಗದ ದಾರಿ ತೋರಿದರೆ, ಪಾಪ ಕರ್ಮಗಳು ನರಕದ ದಾರಿಯನ್ನು ತೋರುತ್ತವೆ. ಪುಣ್ಯ ಕಾರ್ಯಗಳಲ್ಲಿ ತೊಡಗಿದವನಿಗೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ತೋರಿಕೆಯ ಪೂಜೆ, ಸಂಕುಚಿತ ಮನೋಭಾವನೆಗಳು, ನಾನು ಎಂಬುವ ಅಹಂ ಮಾನವನನ್ನು ಸಂಕುಚಿತನನ್ನಾಗಿಸುತ್ತವೆ. ಸತ್ಯಶುದ್ಧವಾದ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.

ಶ್ರೀಮಠದ ಪೀಠಾಧಿಕಾರಿ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಲ್ಲಸಮುದ್ರಗಿರಿ ಓಂಕಾರೇಶ್ವರ ಮಠದ ಫಕಿರೇಶ್ವರ ಸ್ವಾಮೀಜಿ, ತಂಗಡಿ ಅಪ್ಪಣ್ಣ ಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ, ಶಾಂತಾನಂದ ಸ್ವಾಮೀಜಿ, ಆತ್ಮಾನಂದ ಭಾರತಿ ಸ್ವಾಮೀಜಿ, ಶಿವಪ್ರಕಾಶಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ವಿಠ್ಠಪ್ಪ ಗೋರಂಟ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಸ್.ಎ. ಉಗಲಾಟದ, ವೀರವ್ವ ಬಾರಕೇರ, ಹನುಮಂತಪ್ಪ ಕಬ್ಬೇರ, ಮಾರುತಿ ಸೂರಿ, ಡಾ. ಶಿವರಡ್ಡಿ ಭಂಡಿ, ಭೀಮರಾವ್ ಓಂಕಾರ, ಈರಪ್ಪ ಗುಡಿ, ಪ್ರಕಾಶ ಮೇರವಾಡೆ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಡಿ.ಆರ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ ಸಿಂಗಟಾಲಕೇರಿ, ಮುಖಂಡರು, ಇತರರಿದ್ದರು.