ಸತ್ಯ ಎಂದರೇನು?

ವಿದ್ಯಾ ಉಪೇಂದ್ರ ಜೋಶಿ

ಮಹರ್ಷಿ ಆರುಣಿಯ ಮಗ ಶ್ವೇತಕೇತು, ಗುರುಕುಲವಾಸದಲ್ಲಿದ್ದು ಲೌಕಿಕ ವಿದ್ಯಾಭ್ಯಾಸವನ್ನು ಮುಗಿಸಿ ತಂದೆಯ ಆಶ್ರಮಕ್ಕೆ ಹೆಮ್ಮೆಯಿಂದ ಬೀಗುತ್ತ ಬಂದ. ಮಗನಲ್ಲಿರಬಹುದಾದ ತಪು್ಪ ತಿಳಿವಳಿಕೆಯನ್ನು ಹೋಗಲಾಡಿಸುವ ಉದ್ದೇಶದಿಂದ ಆರುಣಿ, ‘ಶ್ವೇತಕೇತು, ಎಲ್ಲವನ್ನೂ ತಿಳಿದುಕೊಂಡೆ ಎಂಬ ಹೆಮ್ಮೆಯಿಂದ ಬೀಗುತ್ತಿರುವೆಯಲ್ಲವೇ?’ ಎಂದು ಪ್ರಶ್ನಿಸಿದರು. ತಂದೆಯ ಬಗ್ಗೆ ಅಪಾರ ಗೌರವ ಹೊಂದಿದ್ದ ಶ್ವೇತಕೇತು, ಅವರ ಪ್ರಶ್ನೆಯಲ್ಲಿ ಏನೋ ವಿಶೇಷವಿದೆ ಎಂದು ಊಹಿಸಿ, ‘ಅಂತಹ ಅಲೌಕಿಕ ಜ್ಞಾನವನ್ನೇನೂ ನಾನು ಪಡೆದಿಲ್ಲ; ದಯವಿಟ್ಟು ತಿಳಿಸಿ, ಉತ್ಸುಕನಾಗಿದ್ದೇನೆ’ ಎಂದ. ಅದಕ್ಕೆ ಆರುಣಿ, ‘ಮಣ್ಣನ್ನು ನೋಡು. ಅದರಿಂದ ಹೂಜಿ, ಮಡಕೆ, ಹಣತೆ, ಹೂದಾನಿ ಹೀಗೆ ಅನೇಕ ವಸ್ತುಗಳನ್ನು ರೂಪಿಸಲಾಗುತ್ತದೆಯಲ್ಲವೇ? ಇದಕ್ಕೆ ಮೂಲವಸ್ತು ಮಣ್ಣೇ ಆದರೂ, ಬಯಸಿದ ರೂಪ ಪಡೆಯಲು ನೀರೂ ಬೇಕು. ಅದೇ ರೀತಿಯಲ್ಲಿ, ಪಾತ್ರೆ-ಪೆಟ್ಟಿಗೆ, ಆಯುಧ-ಆಭರಣಗಳಂಥ ವೈವಿಧ್ಯಮಯ ರೂಪಾಂತರಗಳು ಕಣ್ಣಿಗೆ ಬಿದ್ದರೂ, ಅವುಗಳ ಮೂಲಧಾತು ಲೋಹ. ಇದೇ ಸತ್ಯ. ಹಾಗೆಯೇ, ನಮ್ಮ ರೂಪ, ವರ್ಣ, ಆಕಾರದಲ್ಲಿ ವ್ಯತ್ಯಾಸ ಕಂಡರೂ, ಇವೆಲ್ಲ ಸ್ಥಿರವಾಗಿರುವುದು ‘ಆತ್ಮ’ ಎಂಬ ವಿಶೇಷ ರೀತಿಯ ಅವ್ಯಕ್ತ ‘ಸತ್ಯ’ವಸ್ತುವಿನಿಂದ…’ ಎಂದು ತಿಳಿಹೇಳಿದರು. ‘ಈ ಸಿದ್ಧಾಂತವನ್ನು ಮತ್ತಷ್ಟು ಸ್ಪಷ್ಟಪಡಿಸಲಾದೀತೇ?’ ಎಂದು ಶ್ವೇತಕೇತು ಕೋರಿದ್ದಕ್ಕೆ, ‘ಹಾಗಾದರೆ ಒಂದಷ್ಟು ಉಪ್ಪಿನ ಹರಳನ್ನು ನೀರಿನ ಪಾತ್ರೆಯಲ್ಲಿ ಹಾಕು’ ಎಂದು ಆದೇಶಿಸಿದರು ಮಹರ್ಷಿ ಆರುಣಿ. ಶ್ವೇತಕೇತು ಹಾಗೇ ಮಾಡಿದ. ಕೆಲಹೊತ್ತಿನ ನಂತರ ಉಪ್ಪಿನ ಹರಳನ್ನು ಮೂಲಸ್ವರೂಪದಲ್ಲೇ ಹೊರತೆಗೆಯುವಂತೆ ಆರುಣಿ ಹೇಳಿದ್ದಕ್ಕೆ, ‘ಅದು ಕೈಗೂ ಸಿಗುತ್ತಿಲ್ಲ, ಕಣ್ಣಿಗೂ ಕಾಣುತ್ತಿಲ್ಲ’ ಎಂದ ಶ್ವೇತಕೇತು. ಅದಕ್ಕೆ ಆರುಣಿ, ‘ಉಪು್ಪ ನೀರಿನಲ್ಲಿ ಕರಗಿರುವುದರಿಂದ ‘ರುಚಿಯಾಗಿ’ ದೊರಕುತ್ತದೆಯೇ ವಿನಾ, ‘ಭೌತಿಕವಾಗಿ’ ಅಲ್ಲ. ಆತ್ಮವೂ ಹಾಗೆಯೇ- ಅದನ್ನು ನೋಡಲಾಗದು, ಆದರೆ ಅದರ ಅಸ್ತಿತ್ವ ಮಾತ್ರ ಭಾಸವಾಗುತ್ತದೆ. ದೇಹ ನಿರ್ನಾಮವಾಗುತ್ತದೆ, ಆದರೆ ಆತ್ಮ ಚಿರಸ್ಥಾಯಿ. ಅದು ಜನನ-ಮರಣಗಳಿಗೂ ಅತೀತವಾದದ್ದು…’ ಎಂದರು. ಶ್ವೇತಕೇತುವಿಗೆ ನಿಜಶಿಕ್ಷಣದ ಅರಿವಾಯಿತು.

ಕಣ್ಣಿಂದ ನೋಡಲಾಗದ, ಕೈಗಳಿಂದ ಮುಟ್ಟಲಾಗದ, ಬೂದಿ ಮುಚ್ಚಿದ ಕೆಂಡದಂತಿರುವ ಸಂಗತಿಯೇ ಸತ್ಯ. ಸತ್ಯವನ್ನು ಬಿಚ್ಚಿಟ್ಟಷ್ಟೂ ಮನಸ್ಸು ಹಗುರವಾಗುತ್ತದೆ, ಮುಚ್ಚಿಟ್ಟಷ್ಟೂ ಮನಸ್ಸು ಭಾರವಾಗುತ್ತದೆ. ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ; ಆದರೆ ಅದರಿಂದ ನಾವು ಬದಲಾಗುವ ಪ್ರಸಂಗಗಳೇ ಹೆಚ್ಚು. ಜ್ಞಾನದ ಅರಿವು ಇದ್ದರೆ ಮಾತ್ರ ಸತ್ಯದ ಅರಿವೂ ದಕ್ಕಿ, ಶಾಂತಿ ದೊರೆತು ಮನಸ್ಸು ಪ್ರಶಾಂತವಾಗುತ್ತದೆ, ಜಗತ್ತು ಸುಂದರವಾಗಿ ಕಾಣುತ್ತದೆ. ಅಂಥ ಅಪೂರ್ವ ವಸ್ತುವನ್ನು ನಮ್ಮದಾಗಿಸಿಕೊಂಡು ಅನುಭವಿಸುವುದೇ ಜೀವನದ ಪರಮಗುರಿಯಾಗಬೇಕು. ಏಕೆಂದರೆ, ಸತ್ಯವನ್ನರಿತು ನಡೆದರೆ, ಹಿಮಾಲಯದಲ್ಲಿ ಹರಿಯುವ ನದಿಯ ನೀರಿನಂತೆ ಜೀವನವೂ ಸ್ಪಟಿಕಶುಭ್ರವಾಗಿರುತ್ತದೆ.