ಸತ್ಪಥ ತೋರುವವನೇ ಗುರು

ಗಜೇಂದ್ರಗಡ: ಉತ್ಕೃಷ್ಟ ಸಂಸ್ಕೃತಿ ಎತ್ತಿ ಹಿಡಿಯುವುದೇ ಎಲ್ಲ ಧರ್ಮಗಳ ಗುರಿಯಾಗಿದೆ. ಭಾರತೀಯ ಸಂಸ್ಕೃತಿ ಪರಂಪರೆಯ ಆದರ್ಶಗಳನ್ನು ಪಂಚ ಪೀಠಗಳು ಬೆಳೆಸಿಕೊಂಡು ಬಂದಿವೆ. ಸರ್ವ ಸಮುದಾಯಕ್ಕೂ ಅನ್ವಯಿಸುವ ಸಮನ್ವಯ ಸಂದೇಶಗಳನ್ನು ಕೊಡುತ್ತಾ ಬಂದಿವೆ ಆದರೆ, ವೈಚಾರಿಕತೆಯ ಹೆಸರಿನಲ್ಲಿ ಧರ್ಮ, ಸಂಸ್ಕೃತಿಗೆ ಧಕ್ಕೆ ತರುವುದು ಖೇದಕರ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಸೂಡಿ ಗ್ರಾಮದಲ್ಲಿ ಕೊಟ್ಟೂರ ಬಸವೇಶ್ವರ ಶಿವಾಚಾರ್ಯರ ಪುಣ್ಯಾರಾಧನೆಯ ಶತಮಾನೋತ್ಸವ ಸಮಾರಂಭದ ಉದ್ಘಾಟನೆ ಹಾಗೂ ಉಮಾಪತಿ ಶಿವಾಚಾರ್ಯರ 71ನೇ ಪುಣ್ಯತಿಥಿ ಮತ್ತು ಜಾತ್ರಾಮಹೋತ್ಸವದ ಅಂಗವಾಗಿ ಉಜ್ಜಯನಿಯ ಜಗದ್ಗುರು ಶ್ರೀ ಸಿದ್ಧಲಿಂಗ ಭಗವತ್ಪಾದರ ಪುರಾಣ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸುವಿಚಾರದ ಸತ್ಪಥದಲ್ಲಿ ಕರೆದೊಯ್ಯುವ ಶಕ್ತಿ ಗುರುವಿಗಿದೆ. ವೀರಶೈವ ಧರ್ಮದಲ್ಲಿ ಗುರು ಪರಂಪರೆಗೆ ಅತ್ಯಂತ ಪ್ರಾಮುಖ್ಯತೆ ಇದೆ. ಸೂಡಿ ಜುಕ್ತಿ ಹಿರೇಮಠದ ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಸಂಸ್ಕೃತ ವಿದ್ವಾಂಸರಾಗಿ ತಮ್ಮ ಉಪದೇಶಗಳ ಮೂಲಕ ಭಕ್ತರ ಬದುಕು ಬೆಳಗಿಸಿದ ಪುಣ್ಯ ಪುರುಷರಾಗಿದ್ದಾರೆ. ಅಂಥವರ ಪುಣ್ಯಾರಾಧನೆ ಶತಮಾನೋತ್ಸವ ಸಮಾರಂಭ ಹಮ್ಮಿಕೊಂಡಿರುವುದು ನಿಮ್ಮೆಲ್ಲರ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ’ ಎಂದರು.

ಶಾಸಕ ಕಳಕಪ್ಪ ಬಂಡಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶೇಖರಗೌಡ್ರ ದ್ಯಾಮನಗೌಡ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಪುರಾಣವನ್ನು ಹದ್ಲಿ ಹಿರೇಮಠದ ಶಿವರಾಜ ಶಾಸ್ತಿ›ಗಳು ಪ್ರಾರಂಭಿಸಿದರು. ಕಲ್ಲಿನಾಥ ಶಾಸ್ತಿ›, ಹಿರೇವಡ್ಡಟ್ಟಿ ಹಿರೇಮಠದ ವೀರೇಶ್ವರ ಶಿವಾಚಾರ್ಯರು, ಶಿವಾನಂದಯ್ಯ ಜುಕ್ತಿಮಠ, ಕೇದಾರಯ್ಯ ಜುಕ್ತಿಮಠ, ಉಮೇಶ ಗುಡಿಮನಿ, ರವಿ ಬಿದರೂರ, ಎಸ್. ಮಾರನಬಸರಿ, ಭಾಸ್ಕರಸಾ ರಾಯಬಾಗಿ, ಎಸ್. ಬೆಲ್ಲದ, ಬಾಳು ಗೌಡರ ಇತರರು ಇದ್ದರು.

ಸಮಾಜ ಒಡೆಯುವ ತಂತ್ರ ಖಂಡನೀಯ

ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ಬಸವಣ್ಣನವರ ಹೆಸರು ದುರುಪಯೋಗ ಮಾಡಿಕೊಂಡು ವೀರಶೈವ ಲಿಂಗಾಯತ ಸಮಾಜ ಒಡೆಯುವ ತಂತ್ರಗಾರಿಕೆ ಮಾಡುವುದು ಖಂಡನೀಯ. ಧರ್ಮ ಒಡೆಯಲು ಹೋದವರು ಈಗ ನಾಶವಾಗಿದ್ದಾರೆ. ಧರ್ಮ ಎಂದೂ ನಾಶವಾಗುವದಿಲ್ಲ. ಗುರು ಎಂದೂ ನಾಶವಾಗುವುದಿಲ್ಲ. ಧರ್ಮವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.