ಸತ್ತ ಮೇಲೂ ಸಮಸ್ಯೆ!

ಜಿ.ಬಿ. ಹೆಸರೂರ ಶಿರಹಟ್ಟಿ: ಸಾವು ಅನ್ನೋದು ಘೊರ. ಅದು ಯಾರನ್ನೂ ಬಿಡುವುದಿಲ್ಲ. ಆದರೆ, ತಾಲೂಕಿನ ಹಲವಾರು ಗ್ರಾಮಗಳ ಜನರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಏಕೆಂದರೆ, ಈ ಊರುಗಳಲ್ಲಿ ಸ್ಮಶಾನಗಳೇ ಇಲ್ಲ. ಸತ್ತವರ ಅಂತ್ಯ ಸಂಸ್ಕಾರ ಮಾಡುವುದೇ ಇವರಿಗೆ ದೊಡ್ಡ ಸಮಸ್ಯೆಯಾಗಿದೆ. ಶವ ಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದ್ದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

ಕುಡಿಯುವ ನೀರು, ರಸ್ತೆ, ವಿದ್ಯುತ್, ಶೌಚಗೃಹದಂತಹ ಮೂಲಸೌಲಭ್ಯಗಳಲ್ಲಿ ಸ್ಮಶಾನ ಭೂಮಿಯೂ ಒಂದು. ಆದರೆ, ಇತ್ತೀಚಿನ ದಿನಗಳಲ್ಲಿ ಬರಡು ಭೂಮಿಗೂ ಬಂಗಾರದ ಬೆಲೆ ಬಂದಿದ್ದರಿಂದ ಶವ ಸಂಸ್ಕಾರಕ್ಕೆ ನೀಡಿದ ಅಲ್ಪ ಭೂಮಿಯನ್ನೂ ಹಿಂಪಡೆಯುವ ಯತ್ನಗಳು ನಡೆದಿವೆ. ಇನ್ನೊಂದೆಡೆ, ಸಹೃದಯಿ ರೈತರು ಸ್ಮಶಾನಕ್ಕಾಗಿ ನೀಡಿದ ಜಮೀನು ಖರೀದಿಗೆ ಸರ್ಕಾರ ಹಣ ನೀಡಲು ಹಿಂದೇಟು ಹಾಕುತ್ತಿದೆ. ಇದರಿಂದಾಗಿ, ರುದ್ರಭೂಮಿ ಸಮಸ್ಯೆ ಗ್ರಾಮಸ್ಥರನ್ನು ಅಂತ್ಯಕ್ರಿಯೆಗಾಗಿ ರಸ್ತೆ ಬದಿ, ಹಳ್ಳ-ಕೊಳ್ಳಗಳತ್ತ ಅಲೆದಾಡುವಂತಾಗಿದೆ.

22 ಗ್ರಾಮಗಳಲ್ಲಿ ಸಮಸ್ಯೆ: ಕಂದಾಯ ಇಲಾಖೆ ಪ್ರಕಾರ ಶಿರಹಟ್ಟಿ ತಾಲೂಕು ವ್ಯಾಪ್ತಿಯ ಒಟ್ಟು 49 ಗ್ರಾಮಗಳ ಪೈಕಿ 25 ಗ್ರಾಮಗಳಲ್ಲಿ ರುದ್ರಭೂಮಿ ವ್ಯವಸ್ಥೆ ಇದೆ. ಇನ್ನುಳಿದ ತಾಲೂಕಿನ ತೊಳಲಿ, ಚವಡಾಳ, ನಾಗರಮಡವು, ಅಂಕಲಿ, ಕೊಕ್ಕರಗುಂದಿ, ಗೋವನಕೊಪ್ಪ, ಹಡಗಲಿ, ಭಾವನೂರ, ಸುಗ್ನಳ್ಳಿ, ತಾರೀಕೊಪ್ಪ, ಸೇವಾನಗರ, ಕೆರಳ್ಳಿ, ಕುಸ್ಲಾಪುರ, ಕೋಗನೂರ, ಕಲ್ಲಾಗನೂರ, ಶಿವಾಜಿನಗರ, ಬಿಜ್ಜೂರ, ನಾರಾಯಣಪುರ, ಹೆಬ್ಬಾಳ, ಕನಕವಾಡ, ಪರಸಾಪುರ, ಬಸಾಪುರ, ಹೊಸಳ್ಳಿ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲ. ಈ ಗ್ರಾಮಸ್ಥರ ಗೋಳು ಹೇಳತೀರದು. ಉಳಿದಂತೆ ಗುಡ್ಡದಪುರ, ಕುಸ್ಲಾಪುರ, ರಣತೂರ ಹಾಗೂ ಶಿರಹಟ್ಟಿ ಪಪಂ ವ್ಯಾಪ್ತಿಯ ಹರಿಪುರ ಗ್ರಾಮಗಳಲ್ಲಿ ರುದ್ರಭೂಮಿ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕಗ್ಗಂಟಾದ ಭೂಮಿ ಖರೀದಿ: ತಾಲೂಕು ಅಧಿಕಾರಿಗಳು ಖಾಸಗಿ ಜಮೀನು ಹುಡುಕಿ ಬೇಸತ್ತಿದ್ದಾರೆ. ಯಾರಾದರೂ ಸ್ವಲ್ಪ ಭೂಮಿ ನೀಡಲು ಮುಂದಾದರೂ ಸರ್ಕಾರದ ನಿಗದಿತ ಬೆಲೆ ಒಪ್ಪುತ್ತಿಲ್ಲ. ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚು ಪರಿಹಾರ ನೀಡುತ್ತೇವೆ ಎಂದರೂ ಸಿದ್ಧರಿಲ್ಲ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು. ಇನ್ನು, ಕೆಲವೆಡೆ ಸ್ಮಶಾನಕ್ಕೆ ನೀಡಿದ ಭೂಮಿ ಖರೀದಿಸಲು ಹಣ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರೂ ಪಾವತಿಸಿಲ್ಲ. ಹೀಗಾಗಿಯೇ, ಭೂಮಿ ಖರೀದಿ ಪ್ರಕ್ರಿಯೆ ಕಗ್ಗಂಟಾಗಿ ಉಳಿದಿದೆ. ಇದರಿಂದಾಗಿ, ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕಿದೆ.

ಸತ್ತವನು ಕಚೇರಿ ಆವರಣಕ್ಕೆ: ಶಿರಹಟ್ಟಿ ಪಪಂ ಆಡಳಿತ ವ್ಯಾಪ್ತಿಯ ಹರಿಪುರ ಗ್ರಾಮದಲ್ಲಿ ಇತ್ತೀಚೆಗೆ ನಿವಾಸಿಯೊಬ್ಬರು ಮೃತಪಟ್ಟಿದ್ದರು. ಆಗ ಅವರ ಶವ ಸಂಸ್ಕಾರಕ್ಕೆ ತೆರಳಿದಾಗ ಸ್ಮಶಾನಕ್ಕಾಗಿ ಭೂಮಿ ನೀಡಿದ ಬಾಬಣ್ಣ ಹಾಲಪ್ಪನವರ ಅವಕಾಶ ನೀಡಲಿಲ್ಲ. ಅವರು 5 ವರ್ಷಗಳ ಹಿಂದೆ ಸ್ಮಶಾನಕ್ಕಾಗಿ ನೀಡಿದ 2 ಎಕರೆ ಭೂಮಿಗೆ ಸರ್ಕಾರ 13.48 ಲಕ್ಷ ರೂ. ನಿಗದಿಪಡಿಸಿದರೂ ಈವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳಿ ಶವಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ. ಆಗ ಆಕ್ರೋಶಗೊಂಡ ಗ್ರಾಮಸ್ಥರು ಶವವನ್ನು ತಹಸೀಲ್ದಾರ್ ಕಚೇರಿ ಆವರಣಕ್ಕೆ ತಂದು ಪ್ರತಿಭಟನೆ ನಡೆಸಿದ್ದರು.

ಖಾಸಗಿ ಜಾಗ ಇಲ್ಲದ್ದರಿಂದ ರುದ್ರಭೂಮಿ ಸಮಸ್ಯೆ ಹೋಗಲಾಡಿಸಲು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ರೈತರ ಮನವೊಲಿಸಲಾಗುತ್ತಿದೆ. ರೈತರಿಂದ ಒಪ್ಪಿಗೆ ಪತ್ರದ ಅರ್ಜಿ ಸ್ವೀಕರಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಪ್ರಯತ್ನ ನಡೆದಿದೆ. ಈಗಾಗಲೇ ಶಿರಹಟ್ಟಿ ತಾಲೂಕಿನ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಭೂಮಿ ಗುರುತಿಸಿ ಖರೀದಿಯ ಹಣ ಬಿಡುಗಡೆಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿದೆ. ಹಂತ ಹಂತವಾಗಿ ಎಲ್ಲ ಹಳ್ಳಿಗಳಿಗೂ ರುದ್ರಭೂಮಿ ವ್ಯವಸ್ಥೆ ಮಾಡಲಾಗುತ್ತದೆ.

| ಯಲ್ಲಪ್ಪ ಗೋಣೆಣ್ಣವರ, ತಹಸೀಲ್ದಾರ್, ಶಿರಹಟ್ಟಿ

ಗ್ರಾಮಕ್ಕೆ ಸ್ಮಶಾನ ಭೂಮಿ ಒದಗಿಸುವಂತೆ ದಶಕಗಳಿಂದ ಪ್ರಯತ್ನ ನಡೆದಿದೆ. ಗ್ರಾಮಸ್ಥರ ಗೋಳು ತಪ್ಪಿಸಲು ಸಹೃದಯಿ ರೈತರು ತಮ್ಮ ಭೂಮಿ ನೀಡಲು ಮುಂದಾದರೂ ಸರ್ಕಾರ ಖರೀದಿ ಹಣ ಬಿಡುಗಡೆಗೆ ನಿರ್ಲಕ್ಷ್ಯ ತಾಳಿದ್ದು ಸರಿಯಲ್ಲ. ಮುಂದಿನ ದಿನಗಳಲ್ಲಿ ತಾಲೂಕಾಡಳಿತ ಕಚೇರಿ ಆವರಣದಲ್ಲಿನ ಶವ ಸಂಸ್ಕಾರ ನಡೆದರೂ ಅಚ್ಚರಿಪಡುವಂತಿಲ್ಲ.

| ವಿ.ವಿ. ಕಪ್ಪತ್ತನವರ, ಜಿಪಂ ಮಾಜಿ ಅಧ್ಯಕ್ಷ

Leave a Reply

Your email address will not be published. Required fields are marked *