ಸತ್ತ ಕೂಸನ್ನು ಬೀದಿಗೆ ಎಸೆದ ಬಾಣಂತಿ ಸಂಬಂಧಿಕರು

ಗದಗ: ನಗರದ ಮಲ್ಲಸಮುದ್ರ ಬಳಿಯ ಜಿಲ್ಲಾಸ್ಪತ್ರೆ ಹಿಂಬಾಗಿಲಿನ ಹತ್ತಿರ ನವಜಾತ ಹೆಣ್ಣು ಶಿಶುವಿನ ಶವ ಮಂಗಳವಾರ ಪತ್ತೆಯಾಗಿದೆ.

ಕೂಸಿನ ಒಂದು ಕೈ ಮತ್ತು ಒಂದು ಕಾಲನ್ನು ನಾಯಿಗಳು ತಿಂದು ಹಾಕಿರುವ ಸ್ಥಿತಿಯಲ್ಲಿ ಶವ ಬಿದ್ದಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ

ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಕೂಸಿನ ಸಂಬಂಧಿಕರಿಗೆ ಶವ ಒಪ್ಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಗದಗ ವೈದ್ಯಕೀಯ ಮಹಾವಿದ್ಯಾಲಯ (ಜಿಮ್್ಸ) ನಿರ್ದೇಶಕ ಡಾ.ಪಿ.ಎಸ್.ಭೂಸರಡ್ಡಿ, ಜಿಲ್ಲೆಯ ತಾಲೂಕು ಕೇಂದ್ರವೊಂದರಿಂದ ಸೋಮವಾರ ರಾತ್ರಿ ಮಹಿಳೆಯೊಬ್ಬರು ಹೆರಿಗೆಗಾಗಿ ಬಂದಿದ್ದರು. ತಡರಾತ್ರಿ ಹೆರಿಗೆಯಾಗಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅದರಲ್ಲಿ ಹೆಣ್ಣು ಕೂಸು ಮೃತಪಟ್ಟಿದೆ. ಮೃತ ಕೂಸನ್ನು ಮಹಿಳೆಯರ ಸಂಬಂಧಿಕರು ಜಿಲ್ಲಾಸ್ಪತ್ರೆ ಬಳಿ ಎಸೆದು ಹೋಗಿದ್ದಾರೆ. ನಾಯಿಗಳು ಶವವನ್ನು ಎಳೆದಾಡಿ ಜಿಲ್ಲಾಸ್ಪತ್ರೆಯ ಹಿಂಬಾಗಿಲಿನಲ್ಲಿ ಬಿಟ್ಟು ಹೋಗಿವೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ, ಹೆರಿಗೆ ದಾಖಲಾತಿ ಪರಿಶೀಲಿಸಿ ತಕ್ಷಣ ಬಾಣಂತಿ ಸಂಬಂಧಿಕರನ್ನು ಕರೆದು ವಿಚಾರಿಸಲಾಯಿತು. ಅಲ್ಲದೆ, ಕೂಸಿನ ಅಂತ್ಯಕ್ರಿಯೆ ನೆರವೇರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದಾಗ ಶವವನ್ನು ಬಾಣಂತಿ ಸಂಬಂಧಿಕರು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋದರು. ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ಬಗ್ಗೆ ಬಹಿರಂಗ ಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಿವರಿಸಿದರು.

ಅಪರಿಚಿತ ಸಾಧು ಸಾವು

ನರಗುಂದ: ತಾಲೂಕಿನ ಜಗಾಪೂರ ಗ್ರಾಮದ ಸಿದ್ಧಾರೂಢರ ಜಾತ್ರೆಗೆ ಬಂದಿದ್ದ ಅಪರಿಚಿತ ಸಾಧುವೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.

ಮೇ 18ರಂದು ಜಾತ್ರೆ ಸಂಪನ್ನಗೊಂಡಿದೆ. ಪ್ರತಿ ವರ್ಷ ಜಾತ್ರೆಗೆ ವಿವಿಧೆಡೆಯಿಂದ ನೂರಾರು ಸಾಧು-ಸಂತರು ಆಗಮಿಸುತ್ತಾರೆ. ಮೃತಪಟ್ಟ ಸಾಧು ಹೊರತುಪಡಿಸಿ ಎಲ್ಲರೂ ಜಾತ್ರೆ ಬಳಿಕ ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಸಿದ್ಧಾರೂಢರ ಮಠದಲ್ಲಿಯೇ ಸಾಧು ಉಳಿದುಕೊಂಡಿದ್ದರು.

ಮಂಗಳವಾರ ಬೆಳಗ್ಗೆ ಅವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಗ್ರಾಮಸ್ಥರು ಗಮನಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾಧು ಬಗ್ಗೆ ಮಾಹಿತಿ ಇಲ್ಲದ್ದರಿಂದ ಗ್ರಾಮದ ಭಕ್ತರೆಲ್ಲ ಸಭೆ ಸೇರಿ ಸಿದ್ಧಾರೂಢ ಮಠಕ್ಕೆ ಸೇರಿದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಈ ಕುರಿತು ಸಿದ್ಧಾರೂಢ ಮಠದ ಟ್ರಸ್ಟ್ ಅಧ್ಯಕ್ಷ ದೇವರಡ್ಡಿ ಹಂಚಿನಾಳ ಅವರು ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *