ಔರಾದ್: ಜೀವನದ ಮುಖ್ಯ ಘಟ್ಟ ದಾಂಪತ್ಯ ಜೀವನ. ಸತಿ-ಪತಿ ಹೊಂದಾಣಿಕೆಯಿಂದ ಜೀವನ ನಡೆಸಿದರೆ ಇಡೀ ಕುಟುಂಬವನ್ನು ಸಂತಸದಿಂದ ಇಡಲು ಸಾಧ್ಯ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಅನುಭವ ಮಂಟಪದಲ್ಲಿ ಭಾರತೀಯ ಬಸವ ಬಳಗದ ಸಹಯೋಗದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪತಿ-ಪತ್ನಿಯರಾದ ಮಾತ್ರಕ್ಕೆ ನಿಮ್ಮೆಲ್ಲ ಅಭಿರುಚಿಗಳನ್ನು ಬಲಿಕೊಡಬೇಕಾದ ಅನಿವಾರ್ಯತೆ ಇಲ್ಲ. ಗೌರವವಿದ್ದಲ್ಲಿ ಭಿನ್ನತೆಯ ನಡುವೆಯೂ ಸಂತೋಷದಿಂದ ಬದುಕಲು ಸಾಧ್ಯ. ಅದಕ್ಕೆ ಗಂಡ-ಹೆಂಡತಿ ಇಬ್ಬರಲ್ಲೂ ಬದ್ಧತೆ ಬೇಕು. ನಮ್ಮ ಜೀವನಶೈಲಿಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ಸಂಸಾರವನ್ನು ಉಳಿಸಿಕೊಳ್ಳುವ ಅಗತ್ಯ ಇದೆ ಎಂದರು.
ಬಸವಾದಿ ಶರಣರು ನೀಡಿರುವ ವಚನಗಳನ್ನು ಕೇವಲ ಪಠಣ ಮಾಡಿದರಷ್ಟೇ ಸಾಲದು. ಬದಲಿಗೆ ಅವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಜೀವನ ಸುಂದರವಾಗುತ್ತದೆ. ನಿತ್ಯದ ಜಂಜಾಟದ ಬದುಕಿನಲ್ಲಿ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಸತ್ಸಂಗದಿಂದ ಮಾತ್ರ ಮಾನಸಿಕ ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.
ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿದರು. ಉದ್ಯಮಿ ಪ್ರಕಾಶ ಘೂಳೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಉಪನ್ಯಾಸಕ ಕಲ್ಯಾಣರಾವ ಶೆಂಬೆಳ್ಳಿ, ನಿವೃತ್ತ ದ್ವಿತೀಯ ದರ್ಜೆ ಸಹಾಯಕಿ ಗುರಮ್ಮ ಕೆ. ಶೆಂಬೆಳ್ಳಿ ದಾಸೋಹ ಸೇವೆ ಮಾಡಿದರು.
ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಬಂಡೆಪ್ಪ ಕಂಟೆ, ರವೀಂದ್ರ ಮೀಸೆ, ಶಿವರಾಜ ಅಲಮಾಜೆ, ಚಂದು ಘೂಳೆ, ಕಲ್ಲಪ್ಪ ಮುದ್ದಾ, ಇತರರಿದ್ದರು. ಶರಣಪ್ಪ ನಾಗಲಗಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಟಂಕಸಾಲೆ ನಿರೂಪಣೆ ಮಾಡಿದರು. ಮಹಾದೇವ ಘೂಳೆ ವಂದಿಸಿದರು.
