ಶಿರಸಿ: ಇಲ್ಲಿನ ಕೆಡಿಸಿಸಿ ಬ್ಯಾಂಕ್ಗೆ ನಡೆಯಲಿರುವ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದ ಮಾಜಿ ಶಾಸಕ ಸತೀಸ ಸೈಲ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಕಾರವಾರದ ಸತೀಶ ಸೈಲ್ ಅವರು ಚುನಾವಣೆಗೆ ನ. 3ರಂದು 2 ನಾಮಪತ್ರ ಸಲ್ಲಿಸಿದ್ದರು. ಸೂಚಕರಾಗಿ ಕಾರವಾರದ ಗೋಪಿನಾಥ ನಾಯ್ಕ ಹಾಗೂ ಚೇಂಡಿಯಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಸಹಿ ಹಾಕಿದ್ದರು. ಆದರೆ, ಅ. 30ರಂದೇ ನಾಮಪತ್ರ ಸಲ್ಲಿಸಿದ್ದ ಬ್ಯಾಂಕ್ನ ನಿಕಟಪೂರ್ವ ನಿರ್ದೇಶಕ ಪ್ರಕಾಶ ಗುನಗಿ ಅವರಿಗೆ ಸೂಚಕರಾಗಿ ಇದೇ ಇಬ್ಬರು ಸಹಿ ಹಾಕಿದ್ದರು. ಒಬ್ಬನೇ ವ್ಯಕ್ತಿ ಇಬ್ಬರಿಗೆ ಸೂಚಕನಾಗಿ ಸಹಿ ಹಾಕಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಮೊದಲು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಯ ನಾಮಪತ್ರ ಸಿಂಧುಗೊಳಿಸಿ ನಂತರ ಸಲ್ಲಿಸಿದ ಸೈಲ್ ನಾಮಪತ್ರ ತಿರಸ್ಕರಿಸಲಾಗಿದೆ. ಒಟ್ಟು 36 ಅಭ್ಯರ್ಥಿಗಳ 62 ನಾಮಪತ್ರಗಳನ್ನು ಸಿಂಧುಗೊಳಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಆಕೃತಿ ಬನ್ಸಾಲ್ ತಿಳಿಸಿದ್ದಾರೆ.
ಅವಿರೋಧ ಆಯ್ಕೆ ಅಂತಿಮ: ಕಾರವಾರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕ್ಷೇತ್ರದಿಂದ ಮೂವರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಸೈಲ್ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಪ್ರಕಾಶ ಗುನಗಿ ಹಾಗೂ ಸುರೇಶ ಪೆಡ್ನೇಕರ ಕಣದಲ್ಲಿದ್ದಾರೆ. ನಾಮಪತ್ರ ವಾಪಸ್ ಪಡೆಯುವ ದಿನವಾದ ನ. 5ರಂದು ಸುರೇಶ ಪೆಡ್ನೇಕರ ತಮ್ಮ ಉಮೇದುವಾರಿಕೆ ಹಿಂಪಡೆಯುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು, ಈ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ.
ಸೈಲ್ಗೆ ಮುಖಭಂಗ: ಕಳೆದ ಬಾರಿಯ ಆಡಳಿತ ಮಂಡಳಿಗೆ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಸ್ಥಾನ ಪಡೆದಿದ್ದ ಕಾರವಾರದ ಮಾಜಿ ಶಾಸಕ ಸತೀಶ ಸೈಲ್ ಈ ಬಾರಿ ಕಾರವಾರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕ್ಷೇತ್ರದಿಂದ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ, ಆರಂಭದಲ್ಲೇ ಮುಗ್ಗರಿಸಿದ ಅವರಿಗೆ ಘಟನೆಯಿಂದ ತೀವ್ರ ಮುಖಭಂಗ ಆದಂತಾಗಿದೆ. ಇದರಿಂದ ಸೈಲ್ ಪ್ರತಿಸ್ಪರ್ಧಿ ಆಗಿದ್ದ ಪ್ರಕಾಶ ಗುನಗಿ ಅವಿರೋಧ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.